ಕುದುರೆ ವ್ಯಾಪಾರ ಮಾಡಿದ್ದೇ ಬಿಎಸ್‌ವೈ ಸಾಧನೆ: ಮಾಜಿ ಪ್ರಧಾನಿ ದೇವೇಗೌಡ

Update: 2019-12-02 16:21 GMT

ಬೆಳಗಾವಿ, ಡಿ. 2: ಆಪರೇಷನ್ ಕಮಲದ ಮೂಲಕ ಕುದುರೆ ವ್ಯಾಪಾರ ಮಾಡಿದ್ದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಹತ್ತರ ಸಾಧನೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಸೋಮವಾರ ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ವೇಳೇ ಮಾತನಾಡಿದ ಅವರು, ‘ಅನರ್ಹ ಶಾಸಕರೆ ಮುಂದಿನ ಮಂತ್ರಿಗಳು’ ಎಂದು ಬಿಎಸ್‌ವೈ ಭಾಷಣ ಮಾಡಿದ್ದಾರೆ. 105ಮಂದಿ ಬಿಜೆಪಿ ಶಾಸಕರ ಪೈಕಿ 18 ಮಂದಿಯನ್ನು ಸಚಿವರನ್ನಾಗಿ ಮಾಡಿದ್ದಾರೆ.

ಬಿಜೆಪಿಯಲ್ಲೆ 80 ಮಂದಿ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದು, ಅವರನ್ನೆಲ್ಲ ಬಿಟ್ಟು 15 ಅನರ್ಹರನ್ನು ಮಂತ್ರಿ ಮಾಡುವ ಆಶ್ವಾಸನೆ ನೀಡಿದ್ದಾರೆ. ಸೋತ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡದೆ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲ ಜನರು ನಂಬಬೇಕೇ ಎಂದು ಪ್ರಶ್ನಿಸಿದರು.

‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕೆ.ಸಿ.ವೇಣುಗೋಪಾಲ್ ಹೇಳಿಕೆಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಮೈತ್ರಿ ಸರಕಾರ ಪತನಕ್ಕೆ ಕಾರಣ ಗೊತ್ತಿದೆ. ಕರ್ನಾಟಕದ ಪರಿಸ್ಥಿತಿ ಮಹಾರಾಷ್ಟ್ರದ ಪರಿಸ್ಥಿತಿ ಭಿನ್ನ. ಮೈತ್ರಿಯಿಂದ ದೂರವಿದ್ದು ಹೋರಾಟ ಮಾಡಬೇಕೆಂಬುದು ನಮ್ಮ ಇಚ್ಛೆ ಎಂದು ನುಡಿದರು.

ನಾನು ಲೋಕಸಭಾ ಸದಸ್ಯನೂ ಅಲ್ಲ, ಪ್ರಧಾನಿಯೂ ಅಲ್ಲ. ಬೆಳಗಾವಿ ಮೇಲೆ ನನಗೆ ವಿಶೇಷ ಗೌರವವಿದೆ. ನಾನು ಸಿಎಂ ಆಗಿದ್ದ ವೇಳೆ ಬೆಳಗಾವಿ ಜಿಲ್ಲೆಯಿಂದ ಜೆಡಿಎಸ್‌ನ 14 ಮಂದಿ ಶಾಸಕರು ಆಯ್ಕೆಯಾಗಿದ್ದರು. ಹೀಗಾಗಿ ಈ ಭಾಗಕ್ಕೂ ನಮಗೂ ಸಂಬಂಧವಿದೆ. 8 ಸಕ್ಕರೆ ಕಾರ್ಖಾನೆಗಳನ್ನು ನೀಡಿದ್ದೆ. ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದಿದ್ದೆ ಎಂದು ನೆನಪು ಮಾಡಿಕೊಂಡರು.

ಗೋಕಾಕ್ ಕ್ಷೇತ್ರದ ಅಶೋಕ್ ಪೂಜಾರಿ ಅವರನ್ನು ಆಯ್ಕೆ ಮಾಡುವ ಮೂಲಕ ಇಲ್ಲಿನ ಜನತೆ ಜೆಡಿಎಸ್ ಪಕ್ಷಕ್ಕೆ ಬಲ ನೀಡಬೇಕು ಎಂದು ದೇವೇಗೌಡ ಇದೇ ವೇಳೆ ಮತದಾರರಲ್ಲಿ ಮನವಿ ಮಾಡಿದರು. ಈ ವೇಳೇ ಅಭ್ಯರ್ಥಿ ಅಶೋಕ್ ಪೂಜಾರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News