ತಾರಕಕ್ಕೇರಿದ ಕೆ.ಆರ್.ಪೇಟೆ ಉಪಚುನಾವಣೆ ಪ್ರಚಾರ: ನಾಯಕರ ಕೆಸರೆರಚಾಟ, ಆರೋಪ-ಪ್ರತ್ಯಾರೋಪಗಳ ಸುರಿಮಳೆ

Update: 2019-12-02 17:04 GMT

ಮಂಡ್ಯ, ಡಿ.2: ಕೆ.ಆರ್.ಪೇಟೆ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬೀಳಲಿದ್ದು, ಪ್ರಚಾರ ತಾರಕಕ್ಕೇರಿದೆ. ಸೋಮವಾರ ಮೂರು ಪಕ್ಷಗಳಿಂದ ಬಿರುಸಿನ ಪ್ರಚಾರ ನಡೆಸಿ, ನಾಯಕರು ಪರಸ್ಪರ ಕೆಸರೆರಚಾಟ, ಆರೋಪ-ಪ್ರತ್ಯಾರೋಪಗಳ ಸುರಿಮಳೆಗೆರೆದರು. ಕಾಂಗ್ರೆಸ್ ಪಕ್ಷದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ.ಯತೀಂದ್ರ, ಪಕ್ಷದ ಉಸ್ತುವಾರಿ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪ್ರಚಾರ ನಡೆಸಿದರು.

ಅನರ್ಹ ಶಾಸಕ ಪಟ್ಟ ಕಟ್ಟಿಕೊಂಡು ಬಿಜೆಪಿಯ ಅಭ್ಯರ್ಥಿಯಾಗಿರುವ ಕೆ.ಸಿ.ನಾರಾಯಣಗೌಡ ಪರವಾಗಿ ಉಸ್ತುವಾರಿಯಾಗಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಯಡಿಯೂರಪ್ಪ ಪುತ್ರ ವಿಜಯೇಂದ್ರ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಇತರ  ಮುಖಂಡರು ಬಿರುಸಿನ ಪ್ರಚಾರ ಕೈಗೊಂಡರು.

ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರವಾಗಿ ಪಕ್ಷದ ಹಲವು ಮುಖಂಡರು ಪ್ರಚಾರವನ್ನು ಬಿರುಸಿಗೊಳಿಸಿದರು. ಇವರು ಮುಖ್ಯವಾಗಿ ಬಹಿರಂಗ ಸಭೆ, ಪತ್ರಿಕಾಗೋಷ್ಠಿಗೆ ಮೊರೆ ಹೋಗದೆ ನೇರವಾಗಿ ಮತದಾರರನ್ನು ಭೇಟಿಯಾಗಿ ಮತ ಯಾಚಿಸುತ್ತಿರುವುದು ಕಂಡುಬಂತು.

ಸರಕಾರ ಉಳಿಸಿಕೊಳ್ಳಲು ಬಿಜೆಪಿಯ ಅಭ್ಯರ್ಥಿ ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಬಿಜೆಪಿ ನಾಯಕರು ಇದುವರೆಗೆ ಸಮುದಾಯದ ಮುಖಂಡರ ನೇತೃತ್ವದಲ್ಲಿ ಸಮಾವೇಶಗಳನ್ನು ನಡೆಸಿ ಸಮುದಾಯದ ಮತದಾರರ ಸೆಳೆಯುವ ಯತ್ನ ನಡೆಸಿದರು.

ಮತ್ತೊಂದೆಡೆ, ಮುಖ್ಯಮಂತ್ರಿ ಯಡಿಯೂರಪ್ಪ ಕೆ.ಆರ್.ಪೇಟೆ ಮೂಲದವರಾಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂಬುದಾಗಿ ಬಿಜೆಪಿ ನಾಯಕರು ಪ್ರಚಾರದಲ್ಲಿ ಹೆಚ್ಚು ಒತ್ತು ನೀಡಿದ್ದಾರೆ. ಇದಲ್ಲದೆ, ಎದುರಾಳಿ ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧವೂ ವಾಗ್ದಾಳಿ ಮುಂದುವರಿಸಿದ್ದಾರೆ.
ಸತತ ಎರಡು ಬಾರಿ ಸೋಲು ಕಂಡಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷದ ನಾಯಕರ ಬೆಂಬಲದೊಂದಿಗೆ ಉರುಪಿನಿಂದ ಮತ ಭೇಟೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಬಂದು ಹೋಗಿದ್ದಾರೆ. ಚಲುವರಾಯಸ್ವಾಮಿ, ಇತರ ನಾಯಕರು ಪ್ರಚಾರ ಕೈಗೊಂಡಿದ್ದು, ಇವರೂ ಎದುರಾಳಿ ಪಕ್ಷದ ಅದರಲ್ಲೂ ಜೆಡಿಎಸ್ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ.

ಇನ್ನು ತನ್ನ ಭದ್ರಕೋಟೆ ಉಳಿಸಿಕೊಳ್ಳುವುದರ ಜತೆಗೆ, ಪಕ್ಷದ್ರೋಹವೆಸಗಿದ ನಾರಾಯಣಗೌಡರನ್ನು ಸೋಲಿಸುವ ಮೂಲಕ ಸಿಎಂ ಯಡಿಯೂರಪ್ಪ ಸರಕಾರಕ್ಕೆ ಎದುರೇಟು ನೀಡಲು ಜೆಡಿಎಸ್ ನಾಯಕರು ಸತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ. ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣಾದಿಯಾಗಿ ಪಕ್ಷದ ಹಲವು ನಾಯಕರು ಮತಭೇಟೆಯಲ್ಲಿ ನಿರತರಾಗಿದ್ದಾರೆ.

ಒಟ್ಟಾರೆ, ಹಿಂದೆಂದೂ ಕಂಡಿರದಂತಹ ಮಹತ್ವವನ್ನು ಈ ಉಪಚುನಾವಣೆ ಪಡೆದುಕೊಂಡಿದ್ದು, ಮೂರು ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿವೆ. ಜಿಲ್ಲೆಯಲ್ಲಿ ಕಮಲ ಅರಳಿಸಲೇಬೇಕೆಂದು ಬಿಜೆಪಿ ನಾಯಕರ ದಂಡೇ ಧಾವಿಸುತ್ತಿದ್ದರೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ಶತಾಯಗತಾಯ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಮತ್ತೆ ಹಿಂದಿನ ಪ್ರಾಬಲ್ಯ ಮೆರೆಯಬೇಕೆಂದು ಸೆಣಸಾಟಕ್ಕೆ ಮುಂದಾಗಿದೆ.

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News