ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಜೋರಾಗಿ ಬೀಸುತ್ತಿದೆ: ವೀರಪ್ಪ ಮೊಯ್ಲಿ

Update: 2019-12-02 17:20 GMT

ಮಂಡ್ಯ, ಡಿ.2: ರಾಜ್ಯದಾದ್ಯಂತ ಕಾಂಗ್ರೆಸ್ ಪರವಾದ ಅಲೆ ಜೋರಾಗಿ ಬೀಸುತ್ತಿದೆ. ಡಿ.9ರ ನಂತರ ಬಿಜೆಪಿ ಸರಕಾರ ಪತನಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.

ಸೋಮವಾರ ಕೆ.ಆರ್.ಪೇಟೆಯಲ್ಲಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪರ ಪ್ರಚಾರ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಗತ್ಯ ಬಹುಮತಕ್ಕೆ ಬೇಕಾದ ಶಾಸಕರನ್ನು ಗೆಲ್ಲಿಸಿಕೊಳ್ಳಲಾಗದೆ ಸಿಎಂ ಯಡಿಯೂರಪ್ಪ ಅವರು ರಾಜೀನಾಮೆ ಕೊಡಬೇಕಾದ ಸಂದರ್ಭ ನಿರ್ಮಾಣವಾಗಲಿದೆ ಎಂದರು.

ಮಹಾರಾಷ್ಟ್ರ ರಾಜ್ಯದಲ್ಲಿ ಸರಕಾರ ರಚನೆಗೆ ಅಗತ್ಯ ಬಹುಮತವಿಲ್ಲದಿದ್ದರೂ ಬಿಜೆಪಿ ಅಧಿಕಾರದಾಸೆಗಾಗಿ ಮುಖ್ಯಮಂತ್ರಿ ಸ್ಥಾನಪಡೆದು ಮತ್ತೆ ಒಂದೇ ದಿನದಲ್ಲಿ ರಾಜೀನಾಮೆ ನೀಡಿ ನಗೆಪಾಟಲಿಗೆ ಗುರಿಯಾಗಿದೆ. ರಾಜ್ಯದಲ್ಲೂ ಮಹಾರಾಷ್ಟ್ರದ ಪರಿಸ್ಥಿತಿಯೇ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಬಲದಿಂದ ಎಲ್ಲಾ 15 ಕ್ಷೇತ್ರಗಳಲ್ಲಿಯೂ ಸಾಮರ್ಥ್ಯವನ್ನು ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೆ.ಆರ್.ಪೇಟೆ, ಹುಣಸೂರು ಸೇರಿದಂತೆ 12ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲಿದ್ದಾರೆ. ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅವರು ತಿಳಿಸಿದರು.

ಕೆ.ಆರ್.ಪೇಟೆಯಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯು ನಡೆಯುತ್ತಿರುವಂತೆ ಕಂಡು ಬಂದರೂ ನಿಜವಾದ ಸ್ಪರ್ಧೆಯಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಮಾತ್ರ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಣದ ಹೊಳೆ ಹರಿಸಿದರೂ ಮೂರನೇ ಸ್ಥಾನದಿಂದ ಮೇಲೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಗೆಲುವು ನಿಚ್ಛಳವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ಬಿ.ರಮಾನಾಥರೈ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ವಾಸು, ರಮೇಶ್‍ಬಾಬು ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಸದಸ್ಯ ಕೆ.ಯೂನಸ್ ಖಾನ್, ಪುರಸಭೆಯ ಮಾಜಿ ಅಧ್ಯಕ್ಷ ಕೆ.ಗೌಸ್‍ಖಾನ್, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News