ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ವ್ಯಕ್ತಿಗೆ ಪಾಠ ಕಲಿಸಿ: ಕುಮಾರಸ್ವಾಮಿ

Update: 2019-12-02 17:39 GMT

ಮಂಡ್ಯ, ಡಿ.2: ಹವಾಮಾನ ವೈಪರೀತ್ಯದಿಂದ ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಫ್ಟರ್ ಟೇಕಾಫ್ ಆಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಜೆಡಿಎಸ್ ಸಮಾವೇಶದಲ್ಲಿ ಮೊಬೈಲ್ ಮೂಲಕ ಮತದಾರರಲ್ಲಿ ಮತಯಾಚಿಸಿದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಮೊಬೈಲ್ ಮೂಲಕ ಭಾಷಣ ಮಾಡಿದ ಕುಮಾರಸ್ವಾಮಿ, ಹವಾಮಾನದ ವೈಪರೀತ್ಯದಿಂದ ಬರಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ನಂಬಿದ್ದೇನೆ, ಕೈ ಬಿಡಬೇಡಿ. ಪಕ್ಷದ ಪ್ರಾಮಾಣಿಕ ವ್ಯಕ್ತಿ ದೇವರಾಜು ಅವರನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

ನಿಮ್ಮ ಎಲ್ಲಾ ಸಮಸ್ಯೆ ನೀಗಿಸಲು ನಾನು ಸದಾ ಸಿದ್ದನಿದ್ದೇನೆ. ನಿಮ್ಮ ಪರ ಹೋರಾಟಕ್ಕೆ ನನಗೆ ನೀವು ಶಕ್ತಿ ತುಂಬಿ. ದೇವೇಗೌಡರ ಬೆನ್ನಿಗೆ ಬೆನ್ನಿಗೆ ಚೂರಿ ಹಾಕಿದ ಇಂತಹ ವ್ಯಕ್ತಿಗೆ ತಕ್ಕಪಾಠ ಕಲಿಸಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಕೆ.ಆರ್.ಪೇಟೆಯ ಚುನಾವಣೆ ನಮ್ಮ ಸತ್ವ ಪರೀಕ್ಷೆ. ನೀವು ನಮ್ಮ ಕುಟುಂಬದ ಕೈ ಹಿಡಿಯಬೇಕು. ನಮ್ಮ ಪಕ್ಷದ ಕಾರ್ಯಕರ್ತರನ್ನು ಬೆದರಿಸಲು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ನಮ್ಮ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿದ್ದು, ಅದಕ್ಕಾಗಿ ಸಿಎಂ ಇಲ್ಲಿ ಬಂದು ಕುಳಿತಿದ್ದಾರೆ ಎಂದರು.

‘ನಿನಗೆ ಏನಾದರೂ ಯೋಗ್ಯತೆ ಇದಿಯಾ?’
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾನು ಹೆಣ್ಣಿಗೆ ಗೌರವ ಕೊಟ್ಟು, ಪೂಜ್ಯ ಭಾವನೆಯಿಂದ ಕಂಡು ರಾಜಕೀಯ ಮಾಡುತ್ತಿದ್ದೇನೆ. ನಿನಗೆ ಏನಾದರೂ ಯೋಗ್ಯತೆ ಇದೆಯಾ? 5ರ ಸಂಜೆ 6 ಗಂಟೆಗೆ ನನ್ನ ತಾಕತ್ ತೋರಿಸ್ತೀನಿ. ನೀನು ಅದೇ ಸೀರೆ ಉಟ್ಟು ಕದ್ದು, ಕೆ.ಆರ್.ಪೇಟೆ ಖಾಲಿ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ಕಿಡಿಕಾರಿದರು.

ಪುಟ್ಟರಾಜು ಸಚಿವರಾಗಿದ್ದಾಗ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಅನುದಾನ ಕೊಟ್ಟರು. ನಾನು ಸೀರೆ ತೊಟ್ಟು ಬಂದಿದ್ದರೆ ನನಗೂ ಅನುದಾನ ಕೊಡುತ್ತಿದ್ದರು ಎಂಬ ನಾರಾಯಣಗೌಡ ಆರೋಪಕ್ಕೆ ಕೆಂಡಮಂಡಲವಾಗಿ ಪ್ರತಿಕ್ರಿಯಿಸಿದ ಪುಟ್ಟರಾಜು, ನಿನಗೆ ಟಿಕೆಟ್ ಕೊಡಿಸಿದ್ದು ನಾನು. ನನ್ನ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ನಿನಗೆ ತಾಕತ್ತು ಬಂದಿದೆ. ನಿನಗೆ ನನ್ನ ತಾಕತ್ ಏನು ಅನ್ನೋದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಡಿ.ಸಿ.ತಮ್ಮಣ್ಣ ಕಾಮಾಟಿಪುರ ಅಂದ್ರೆ ಬಾಂಬೆಯವರು ಕೆ.ಆರ್.ಪೇಟೆಗೆ ಬಂದು ಸುದ್ದಿಗೋಷ್ಠಿ ಮಾಡುತ್ತಾರೆ. ನಾರಾಯಣಗೌಡರು ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದರೆ ಅದು ಅವಮಾನ ಅಲ್ವಾ? ಎಂದು ಅವರು ತಮ್ಮಣ್ಣರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

‘ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ’
ಶಾಸಕ ಸುರೇಶ್‍ಗೌಡ ಮಾತನಾಡಿ, ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ. ಬೆಳಗ್ಗೆ ಕಾಂಗ್ರೆಸ್, ರಾತ್ರಿ ಯಡಿಯೂರಪ್ಪ ಜೊತೆ ಇದ್ದ. ಈಗ ಮಧ್ಯರಾತ್ರೀಲಿ ವಿಜಯೇಂದ್ರ ಜೊತೆ ಇದ್ದರೂ ಇರಬಹುದು ಎಂದು ವಾಗ್ದಾಳಿ ನಡೆಸಿದರು.

ಪಾಪ ಚಂದ್ರಶೇಖರ್ ನಿಲ್ಲಿಸಿ ಸೋಲಿಸಲು ಬಿಜೆಪಿ ಜೊತೆ ಕೈ ಜೋಡಿಸುತ್ತಾನೆ. ಆತ ಓರ್ವ ದುಷ್ಟ, ಅಧಿಕಾರ ಇಲ್ಲದಿರುವುದರಿಂದ ನಮ್ಮ ಬೈಯ್ದು ರಾಜ್ಯ ನಾಯಕನಾಗಲು ಹೊರಟಿದ್ದಾನೆ ಎಂದು ಅವರು ವ್ಯಂಗ್ಯವಾಡಿದರು.

4ರ ಅಂಕಿ ಬಿಜೆಪಿಗೆ ಆಗಿ ಬರಲ್ಲ. ಯಡಿಯೂರಪ್ಪ ನಾಲ್ಕು ತಿಂಗಳ ಸಿಎಂ ಆಗಿರುತ್ತಾರೆ. ಚುನಾವಣೆ ಮುಗಿದ ನಂತರ ರಾಜೀನಾಮೆ ನೀಡುತ್ತಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News