ಗಂಡನನ್ನು ಬಿಡುಗಡೆ ಮಾಡದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡುತ್ತೇವೆ

Update: 2019-12-02 18:18 GMT

ಮೈಸೂರು, ಡಿ.2: "ನನ್ನ ಗಂಡ ಅಮಾಯಕ, ಈ ಪ್ರಕರಣಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಗಂಡನನ್ನು ಬಿಡುಗಡೆ ಮಾಡದಿದ್ದರೆ ನಾನು ಮತ್ತು ನನ್ನ ಮೂವರು ಮಕ್ಕಳು ಪೊಲೀಸ್ ಆಯುಕ್ತರ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಮುಹೀಬ್ ಪತ್ನಿ ಹೀನಾಕೌಸರ್ ಅಳಲು ತೋಡಿಕೊಂಡರು. 

ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪರ್ಹಾನ್ ಜೊತೆಗೆ ನೂರ್ ಖಾನ್, ಅಕ್ರಮ್, ಆದಿಬ್ ಪಾಷ, ಮುಹೀಬ್ ಮತ್ತು ಮುಜಾಮಿಲ್ ಎಂಬವರನ್ನು ಬಂಧಿಸಲಾಗಿದೆ. ಈ ಪೈಕಿ ಮುಹೀಬ್ ಪತ್ನಿ ಹೀನಾಕೌಸರ್ ಅವರು ಇಂದು ನಗರದ ಪತ್ರಕರ್ತರ ಭವನದಲ್ಲಿ ಎಸ್‍ಡಿಪಿಐ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ನನ್ನ ಗಂಡ ಗೌರವಯುತವಾಗಿ ಫಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಈ ಪ್ರಕರಣ ನಡೆದ ಮೂರು ದಿನಗಳ ನಂತರ ನಮ್ಮ ಮನೆಗೆ ಬಂದ ಪೊಲೀಸರು ನನ್ನ ಗಂಡನನ್ನು ಪೊಲೀಸ್ ಠಾಣೆಯಲ್ಲಿ ಸಹಿ ಮಾಡಿ ಬರುವಂತೆ ಕರೆದುಕೊಂಡು ಹೋದರು. ನಂತರ ನನ್ನ ಗಂಡ ಬರಲೇ ಇಲ್ಲ" ಎಂದು ಕಣ್ಣೀರು ಹಾಕಿದರು.

ನನ್ನ ಗಂಡನನ್ನು ಬಂಧನ ಮಾಡಲಾಗಿದೆ ಎಂದು ತಿಳಿದು ಅವರನ್ನು ನೋಡಲು ಹೋದರೆ ಅವಕಾಶ ನೀಡಲಿಲ್ಲ. ನಂತರ ಮಹಜರ್ ಗೆ ಎಂದು ನಮ್ಮ ಮನೆಗೆ ಕರೆದುಕೊಂಡು ಬಂದರು. ಆಗ ನನ್ನ ಗಂಡ 'ನಾನು ತಪ್ಪು ಮಾಡಿಲ್ಲ. ನನ್ನನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ' ಎಂದು ಕುರಾನ್ ಮೇಲೆ ಪ್ರಮಾಣ ಮಾಡಿ ಹೇಳಿದ್ದಾರೆ ಎಂದು ದುಖಃ ತೋಡಿಕೊಂಡರು. 

ನಮಗೆ ಮೂವರು ಮಕ್ಕಳಿದ್ದು, ಅವರ ಜೀವನ ನಡೆಸುವುದು ಹೇಗೆ ಎಂಬ ಆತಂಕ ಕಾಡುತ್ತಿದೆ. ನನ್ನ ಗಂಡ ಅಮಾಯಕ. ಅವರನ್ನು ಬಿಡುಗಡೆ ಮಾಡದಿದ್ದರೆ ನನ್ನ ಮೂವರು ಮಕ್ಕಳೊಂದಿಗೆ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News