ಅನರ್ಹರ ರಾಜಕೀಯ ಸಮಾಧಿಗೆ ಮತದಾರ ಕೊನೆ ಹಾರ ಹಾಕುತ್ತಾನೆ: ಡಿ.ಕೆ.ಶಿವಕುಮಾರ್

Update: 2019-12-03 12:39 GMT

ಹೊಸಕೋಟೆ, ಡಿ.3: ಅಧಿಕಾರ ಅನುಭವಿಸಿದರೂ ಪಕ್ಷಕ್ಕೆ ದ್ರೋಹ ಬಗೆದ ಅನರ್ಹ ಶಾಸಕರು ರಾಜಕೀಯ ಸಮಾಧಿಯಾಗ್ತಾರೆ ಅಂತಾ ವಿಧಾನಸಭೆಯಲ್ಲಿ ಹೇಳಿದ್ದೆ. ಅವರ ರಾಜಕೀಯ ಸಮಾಧಿಗೆ ಮತದಾರ ಕೊನೆ ಹಾರ ಹಾಕುತ್ತಾನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮಂಗಳವಾರ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಚುನಾವಣಾ ಪ್ರಚಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ಪಕ್ಷದ ನಾಯಕರು ಎಂಟಿಬಿ ನಾಗರಾಜ್ ವಿಚಾರವಾಗಿ ಸಾಕಷ್ಟು ಚರ್ಚೆ ಮಾಡಿದ್ದಾರೆ ಎಂದರು.

ಯಾರು ಏನೇ ಮಾಡಿದರೂ ಮೇಲೊಬ್ಬ ಎಲ್ಲವನ್ನು ನೋಡುತ್ತಿದ್ದಾನೆ. ಅವನು ಮನಸ್ಸು ಮಾಡಿದರೆ ಈ ಅನರ್ಹರಲ್ಲಿ ಯಾರೂ ಗೆಲ್ಲುವುದಿಲ್ಲ. ನೀವು ಮತ್ತೆ ಕಾಂಗ್ರೆಸ್‌ಗೆ ಮತ ಹಾಕುತ್ತೀರಾ ಅಂತಾ ವಿಶ್ವಾಸ ಇದೆ. ಸುಪ್ರೀಂಕೋರ್ಟ್ ಕೂಡ ನೀನು ಅನರ್ಹ, ನೀನು ಚುನಾವಣೆ ಗೆಲ್ಲದೇ ಮಂತ್ರಿ ಆಗುವುದಿಲ್ಲ ಅಂತಾ ಹೇಳಿದೆ. ಹೀಗಾಗಿ ಯಡಿಯೂರಪ್ಪ ಏನೇ ಆಸ್ತಿ ಬರೆದುಕೊಟ್ಟರು ಈತ ಗೆಲ್ಲುವುದಿಲ್ಲ ಎಂದು ಅವರು ಹೇಳಿದರು.

ನಮ್ಮ ಸರಕಾರದಲ್ಲಿ ಮಂತ್ರಿ ಆಗಿದ್ದರಲ್ಲ ಈಗ ಮತ್ಯಾವ ಮಂತ್ರಿ ಆಗಬೇಕು? ಪಕ್ಷಕ್ಕೆ ದ್ರೋಹ ಬಗೆದವರ ರಾಜಕೀಯ ಸಮಾಧಿಗೆ ಮತದಾರರಾದ ನೀವು ಕೊನೆ ಹಾರ ಹಾಕಬೇಕು. ತಾಯಿಗೆ ದ್ರೋಹ ಬಗೆದವರು ಮತ್ತೆ ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಆ ರೀತಿ ಪಾಠ ಕಲಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದರು. ಅವತ್ತು ನಾನು, ಎಸ್.ಎಂ.ಕೃಷ್ಣ, ಎ.ಕೃಷ್ಣಪ್ಪ, ಮುನೇಗೌಡ್ರು, ಚಿಕ್ಕೆಗೌಡ್ರು ಎಲ್ಲಾ ಸೇರಿ ಎಂಟಿಬಿ ನಾಗರಾಜ್‌ರನ್ನು ಕರೆದುಕೊಂಡು ಬಂದು ಟಿಕೆಟ್ ಕೊಟ್ಟೆವು. ಅವತ್ತು ನಮ್ಮ ಜವಾಬ್ದಾರಿ ಅಂತಾ ಹೇಳಿ ಮತ ಕೇಳಿದೆವು. ನೀವು ಗೆಲ್ಲಿಸಿದಿರಿ, ನಾವು ಬೆಳೆಸಿದೆವು. ನಾವು ಅವರಿಗೆ ಏನು ಕಡಿಮೆ ಮಾಡಿದ್ದೀವಿ? ನಾವು ಅನುದಾನ ಕೊಟ್ಟಿದ್ದು ಅಭಿವೃದ್ಧಿಗಲ್ಲವೇ? ಇನ್ನೇನು ಕೊಡಬೇಕಿತ್ತು ಅವರಿಗೆ? ಎಂದು ಅವರು ಕಿಡಿಕಾರಿದರು.

ನಾನು, ಕೃಷ್ಣಬೈರೇಗೌಡ ರಾತ್ರಿ ಎಲ್ಲ ನ್ಯಾಯ ಹೇಳಿದೆವು. ಅವರನ್ನು ನಾವು ಬೆಳೆಸಿದ್ರೂ, ಸಿದ್ದರಾಮಯ್ಯರವರ ಮಾತು ಕೇಳುತ್ತಾರೆ ಅಂತಾ ಅವರ ಮನೆಗೂ ಕರೆದುಕೊಂಡು ಹೋದೆವು. ಆಗ ನಾನು ಸುಧಾಕರ್‌ನನ್ನು ಕೇಳಬೇಕು ಅಂತಾ ಹೇಳ್ತಾರೆ. ಕೊನೆಗೆ ಸಿದ್ದರಾಮಯ್ಯ ಅವರ ಮನೆ ಹತ್ತಿರ ಮಾಧ್ಯಮಗಳ ಎದುರು ನಾನು ಇಲ್ಲೇ ಇರ್ತೀನಿ ಅಂತಾ ಹೇಳಿ ಆಮೇಲೆ ಬಾಂಬೆಗೆ ಓಡಿ ಹೋದರು ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಪದ್ಮಾವತಿ ಸುರೇಶ್‌ಗೆ ನಾನು ಟಿಕೆಟ್ ಕೊಟ್ಟಿಲ್ಲ. ದಿನೇಶ್ ಕೊಟ್ಟಿಲ್ಲ, ಸಿದ್ದರಾಮಯ್ಯ ಕೊಟ್ಟಿಲ್ಲ, ಟಿಕೆಟ್ ಕೊಟ್ಟಿರೋದು ಸೋನಿಯಾ ಗಾಂಧಿ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಇಂದಿರಾಗಾಂಧಿ ಅವರ ಸೊಸೆ, ರಾಜೀವ್ ಗಾಂಧಿ ಅವರ ಧರ್ಮಪತ್ನಿ. ಆ ತಾಯಿ ಇಂದು ಪದ್ಮಾವತಿ ಸುರೇಶ್‌ಗೆ ಟಿಕೆಟ್ ನೀಡಿದ್ದಾರೆ ಎಂದು ಅವರು ಹೇಳಿದರು.

ಯುಪಿಎ ಸರಕಾರ ಮಾಡುವಾಗ ಎಲ್ಲ ಸಂಸದರು ಬೆಂಬಲ ನೀಡಿದರೂ ಪ್ರಧಾನಿ ಸ್ಥಾನವನ್ನು ದೇಶದ ಆರ್ಥಿಕತೆ, ಅಭಿವದ್ಧಿ, ಯುವಕರಿಗೆ ಉದ್ಯೋಗ ಸಿಗಲಿ ಅಂತಾ ತ್ಯಾಗ ಮಾಡಿದ ತಾಯಿ ಆಕೆ. ಆಕೆ ಇವತ್ತು ಪದ್ಮಾವತಿ ಅವರಿಗೆ ಹಸ್ತದ ಚಿಹ್ನೆ ಕೊಟ್ಟಿದ್ದಾರೆ. ಇವತ್ತು ಆ ಹೆಣ್ಣುಮಗಳ ಬಗ್ಗೆ ಮಾತಾಡ್ತಾನಲ್ಲಾ ಈ ಎಂಟಿಬಿ ನಾಗರಾಜ್ ಎಂದು ಶಿವಕುಮಾರ್ ಕಿಡಿಗಾರಿದರು.

ಈ ಹೆಣ್ಣುಮಗಳು ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ಬಾಗಿಲು ತೆಗೆದು ಒಳಗೆ ಕರೆದುಕೊಂಡು ನಿಮ್ಮ ಮನೆ ಬೆಳಕು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ನೀವು ನಿಮ್ಮ ಮತ ಮಾರಿಕೊಳ್ಳಬೇಡಿ. ಇವತ್ತು ಇಷ್ಟು ಜನ ನಾಯಕರು ಇಲ್ಲಿಗೆ ಬಂದಿರೋದು ನಾವೆಲ್ಲರೂ ನಿಮ್ಮ ಜತೆ ಇದ್ದೇವೆ ಎಂದು ಹೇಳುವುದಕ್ಕೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್, ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ, ಶಾಸಕ ಭೈರತಿ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News