ಸಚಿವ ಮಾಧುಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Update: 2019-12-03 13:35 GMT

ಬೆಂಗಳೂರು, ಡಿ.3: ಲಿಂಗಾಯತರನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಿ, ನೀತಿ ಸಂಹಿತೆ ಉಲ್ಲಂಘಿಸಿರುವ ಸಚಿವ ಮಾಧುಸ್ವಾಮಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಮುಖ್ಯ ಚುನಾವಣಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಸಚಿವ ಮಾಧುಸ್ವಾಮಿ ವಿಜಯನಗರ ಕ್ಷೇತ್ರದ ಉಪ ಚುನಾವಣೆಯ ವೇಳೆ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮುದಾಯದ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಹಾಗೂ ಲಿಂಗಾಯತ ಸಮಾಜದ ಯಾರಿಗೂ ಐದು ವರ್ಷ ಸಿಎಂ ಆಗಿ ಆಡಳಿತ ನಡೆಸಲು ವ್ಯವಸ್ಥೆ ಬಿಟ್ಟಿಲ್ಲ. ಹೀಗಾಗಿ, ಅವರು ಮುಂದುವರಿಯಬೇಕಾದರೆ ಅನರ್ಹರಿಗೆ ಮತ ನೀಡಿ, ಬಿಜೆಪಿ ಅಭ್ಯರ್ಥಿಗೆ ಮತ ನೀಡದೇ ಅನ್ಯರಿಗೆ ಮತ ಕೊಟ್ಟರೆ ಬಿಎಸ್‌ವೈ ಕೆನ್ನೆಗೆ ಹೊಡೆದಂತೆ, ಲಿಂಗಾಯತರ ಒಂದು ಮತವೂ ಅನ್ಯರಿಗೆ ಹಾಕದಂತೆ ಕರೆ ನೀಡಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿ ಜಾತಿ ಮತ ಆಧಾರಿತ ಮತಯಾಚನೆಯಾಗಿದೆ. ಆದುದರಿಂದ ಅವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಚಾರ ಸಭೆಯಲ್ಲಿ ಬಹಿರಂಗವಾಗಿ ಲಿಂಗಾಯತರಿಗೆ ಮತ ಹಾಕುವ ಬಗ್ಗೆ ಹೇಳಿಕೆ ನೀಡಿದ್ದು, ಧರ್ಮ, ಜಾತಿ ಸಮುದಾಯಗಳ ಹೆಸರಿನಲ್ಲಿ ಮತಯಾಚನೆ ಪ್ರಜಾಪ್ರತಿನಿಧಿ ಕಾಯ್ದೆ, ಸಂವಿಧಾನ ವಿರೋಧಿ ಹಾಗೂ ಕಾನೂನು ವಿರೋಧಿಯಾಗಿದೆ. ಅಲ್ಲದೆ, ಕಾನೂನು ಸಚಿವರಾಗಿ ಕಾನೂನು ಪಾಲಿಸದಿರುವುದು ಅಪರಾಧವಾಗಿದೆ. ಹೀಗಾಗಿ, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News