×
Ad

‘ರೈತ ಪರ ಸರಕಾರ’ ಎಂದ ಬಿಎಸ್‌ವೈಗೆ 'ಗೋಲಿಬಾರ್', ‘ಲಾಲಿಪಾಪ್’ ನೆನಪಿಸಿದ ಸಿದ್ದರಾಮಯ್ಯ

Update: 2019-12-03 19:26 IST

ಬೆಂಗಳೂರು, ಡಿ.3: ತಮ್ಮದು ‘ರೈತ ಪರ ಸರಕಾರ’ ಎಂದು ಜಾಹೀರಾತು ನೀಡಿರುವ ಬಿ.ಎಸ್.ಯಡಿಯೂರಪ್ಪನವರೇ 2008ರಲ್ಲಿ ಮುಖ್ಯಮಂತ್ರಿಯಾದ ಕೂಡಲೇ ಗೋಲಿಬಾರ್ ಮಾಡಿ ಇಬ್ಬರು ರೈತರನ್ನು ಸಾಯಿಸಿದ್ದು ಯಾರು? ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದಾಗ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇದೆಯಾ ಎಂದು ಕೇಳಿದವರು ಯಾರು? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ರೈತ ಪರ ಸರಕಾರ ಎನ್ನುವ ಬಿಜೆಪಿ ನಾಯಕರೇ, ನಾವು ರೈತರ ಸಾಲ ಮನ್ನಾ ಮಾಡಿದಾಗ ಅದನ್ನು ‘ಲಾಲಿಪಾಪ್’ ಎಂದು ಗೇಲಿಮಾಡಿದ ಸಚಿವ ಪ್ರಕಾಶ್ ಜಾವಡೇಕರ್ ಯಾವ ಪಕ್ಷದವರು? ಸಾಲಮನ್ನಾಕ್ಕೆ ಕೇಂದ್ರದಿಂದ ಬಿಡಿಗಾಸೂ ನೀಡೋದಿಲ್ಲ ಎಂದು ಹೇಳಿದ್ದ ಸಚಿವ ಅರುಣ್ ಜೇಟ್ಲಿ ಯಾವ ಪಕ್ಷದವರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯದ 22 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಆಗಿರುವ ನಷ್ಟ 50 ಸಾವಿರ ಕೋಟಿ ರೂ., ಕೇಂದ್ರದ ಬಿಜೆಪಿ ಸರಕಾರದಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಕೇಳಿದ್ದ ಪರಿಹಾರ 35 ಸಾವಿರ ಕೋಟಿ ರೂ., ಕೇಂದ್ರ ಕೊಟ್ಟಿದ್ದು 1200 ಕೋಟಿ ರೂ.ಗಳು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಆಗಸ್ಟ್ ಕೊನೆವರೆಗೆ 2,47,628 ಮನೆಗಳು ಹಾನಿಗೀಡಾಗಿವೆ ಎಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿರುವ ರಾಜ್ಯ ಸರಕಾರ, ಹಾನಿಗೀಡಾದ ಮನೆಗಳ ಒಟ್ಟು ಸಂಖ್ಯೆ 97,920 ಎಂದು ಜಾಹೀರಾತಿನಲ್ಲಿ ಹೇಳಿತ್ತು. ಇದರಲ್ಲಿ ಯಾವುದು ನಿಜ ಎಂದು ಅವರು ಪ್ರಶ್ನಿಸಿದ್ದಾರೆ.

ಕಿಸಾನ್ ಸಮ್ಮಾನ್ ಫಲಾನುಭವಿಗಳು 53 ಲಕ್ಷ. ಇವರಲ್ಲಿ ಮೊದಲ ಕಂತಿನಲ್ಲಿ 41 ಸಾವಿರ ರೈತರಿಗೆ 820 ಕೋಟಿ ರೂ., ಎರಡನೆ ಕಂತಿನಲ್ಲಿ 34 ಲಕ್ಷ ರೈತರಿಗೆ 66 ಕೋಟಿ ರೂ.ಮತ್ತು ಮೂರನೆ ಕಂತಿನಲ್ಲಿ 3 ಲಕ್ಷ ರೈತರಿಗೆ 73 ಲಕ್ಷ ರೂ. ನೀಡಲಾಗಿದೆ. ಉಳಿದವರಿಗೆ ಯಾವಾಗ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಯಡಿಯೂರಪ್ಪನವರೇ ಘೋಷಣೆ ಬೇಡ, ಪಾಲನೆಯ ವರದಿ ಕೊಡಿ. ನೆರೆಯಿಂದ ಹಾನಿಗೀಡಾದ ಮನೆಗಳೆಷ್ಟು? ಮಂಜೂರಾದ ಹೊಸಮನೆಗಳೆಷ್ಟು? ಪ್ರವಾಹ ಸಂತ್ರಸ್ತ ಕುಟುಂಬಗಳಲ್ಲಿ ಪರಿಹಾರ ಪಡೆದವರೆಷ್ಟು? ಬೆಳೆ ಪರಿಹಾರ ಪಡೆದ ರೈತ ಕುಟುಂಬಗಳೆಷ್ಟು? ಎಂದು ಸಿದ್ದರಾಮಯ್ಯ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News