ಅನರ್ಹ ಶಾಸಕರು ರಾಜಕೀಯ ವೇಶ್ಯೆಯರು: ಪ್ರೊ.ಮಹೇಶ್ ಚಂದ್ರಗುರು

Update: 2019-12-03 14:30 GMT

ಮೈಸೂರು,ಡಿ.3: ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅನರ್ಹ ಶಾಸಕರು ರಾಜಕೀಯ ವೇಶ್ಯೆಯರು. ಪ್ರಬುದ್ಧ ಮತದಾರರು ಇವರಿಗೆ ಸರಿಯಾಗಿ ಬುದ್ಧಿ ಕಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮತದಾರರಲ್ಲಿ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ದಲಿತ ವೆಲ್ಪೇರ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ಹೀನರು ಮತ್ತು ಹೃದಯವಂತರ ನಡುವೆ ಈ ಚುನಾವಣೆಯ ನಡೆಯುತ್ತಿದ್ದು, ಹೃದಯವಂತಿಕೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು. ಐದು ವರ್ಷ ಸೇವೆ ಮಾಡಲು ಜನ ಇವರನ್ನು ಆಯ್ಕೆ ಮಾಡಿದ್ದರು. ಆದರೆ ಇವರು ರಾಜಕೀಯ ವ್ಯಭಿಚಾರಕ್ಕೆ ಒಳಗಾಗಿ ತಮ್ಮನ್ನು ಮಾರಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದರು. ಇವರಿಗೆ ಯಾವ ಆಧಾರದ ಮೇಲೆ ಮತ ನೀಡಬೇಕು ಎಂದು ಯೋಚಿಸಬೇಕಿದೆ ಎಂದರು.

ಕರ್ನಾಟಕದ ಅರ್ಧಭಾಗ ನೆರೆ ಹಾವಳಿಯಿಂದ ತತ್ತರಿಸಿ ಹೋಗಿ ಜನ ಮನೆ, ಮಠ, ಆಸ್ತಿ, ಪಾಸ್ತಿ ಮತ್ತು ಜಾನುವಾರುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರೆ, ಇವರು ಮುಂಬೈಗೆ ಹೋಗಿ ಕುಡಿದು, ತಿಂದು, ಮೋಜು ಮಸ್ತಿ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷ ಶಾಸಕರನ್ನಾಗಿ ಮಾಡಿದ ಜನರಿಗೆ ಇವರು ದ್ರೋಹ ಬಗೆದಿದ್ದಾರೆ. ಇವರು ಮನೆ ಹಾಳರು, ಸಂವಿಧಾನ ವಿರೋಧಿಗಳು ಎಂದು ಜರಿದರು.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲಿಂಗಾಯತರ ಒಂದು ಮತವೂ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಬಾರದು ಎನ್ನುತ್ತಾರೆ, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಕೂಡಲೇ ಚುನಾವಣಾ ಆಯೋಗ ಇವರ ಮೇಲೆ ಕ್ರಮ ಜರುಗಿಸಬೇಕು. ಜೊತೆಗೆ ಬಸವಣ್ಣನವರ ಭೂಮಿಯಲ್ಲಿ ಯಡಿಯೂರಪ್ಪನ ಆಟ ನಡೆಯುವುದಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷದ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕರು ದೇಶಕ್ಕಾಗಿ ತಮ್ಮ ತ್ಯಾಗ ಬಲಿದಾನ ಮಾಡಿದ್ದಾರೆ. ಈಗಿರುವ ಸಂದರ್ಭದಲ್ಲಿ ಕೋಮುವಾದಿ ಬಿಜೆಪಿ ಮತ್ತು ಜಾತಿವಾದಿ ಜೆಡಿಎಸ್‍ಗಿಂತ ಕಾಂಗ್ರೆಸ್ ಉತ್ತಮ. ಹಾಗಾಗಿ ಉಪಚುನಾವಣೆ ನಡೆಯುತ್ತಿರುವ ಎಲ್ಲಾ 15 ಕ್ಷೇತ್ರಗಳಲ್ಲೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಕೋಮುವಾದಿಗಳಿಗೆ ಬುದ್ಧಿ ಕಲಿಸಬೇಕು ಎಂದು ಹೇಳಿದರು.

ಭ್ರಷ್ಟರ ಮಹಾರಕ್ಷಕ ನರೇಂದ್ರ ಮೋದಿ: ಯುವಕರು ಹಿಂದುಳಿದವರಿಂದ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮಾಡುವವರ ಮಹಾ ರಕ್ಷಕ, ಬಡವರ ರಕ್ಷಣೆ ಮಾಡುವ ಬದಲು ಬಹುರಾಷ್ಟ್ರೀಯ ಕಂಪನಿಗಳ ಮಾಲಕರು, ಶ್ರೀಮಂತರು, ಬಂಡವಾಳ ಶಾಹಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಕರೇ ಹೆಚ್ಚು ಇರುವ ಭಾರತ ದೇಶದಲ್ಲಿ ಯುವಕರನ್ನು ಹುರಿದುಂಬಿಸಿ ಯೋಧರಿಗೆ ಮತ ನೀಡಿ ಎಂದು ಭಾವನಾತ್ಮಕತೆಯ ಮೇಲೆ ಮತ ಪಡೆದ ಇವರು ಯುವಕರ ಸಬಲೀಕರಣಕ್ಕೆ ಇವರ ಕೊಡುಗೆ ಏನು? ನಮ್ಮಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಕರಣಗೊಳಿಸಿ ಉದ್ಯೋಗ ಮತ್ತು ಮೀಸಲಾತಿಯನ್ನು ನಾಶಪಡಿಸಲಾಗುತ್ತಿದೆ. ದೇಶದ ಆರ್ಥಿಕತೆ ಕುಸಿದಿದೆ, ಯುವಕರು ಸ್ವಯಂ ಉದ್ಯೋಗವೂ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿಯವರಿಗೆ 56 ಇಂಚಿನ ಎದೆ ಇದ್ದರೆ ಸಾಲದು ಹೃದಯವಂತಿಕೆ ಬೇಕು. ಸೂಟು ಬೂಟು ಹಾಕಿ ವಿದೇಶ ತಿರುಗಿದಾಕ್ಷಣ ಪ್ರಧಾನಿ ಎಂದು ಒಪ್ಪಲು ಸಾಧ್ಯವಿಲ್ಲ, ಬಡವರು, ದಲಿತರು, ರೈತರು, ಕಾರ್ಮಿಕರ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ಬಿಜೆಪಿ ಪಕ್ಷಕ್ಕೆ ಹೋಗಿರುವ ದಲಿತ ನಾಯಕರ್ಯಾರು ಸಮುದಾಯದ ಉದ್ಧಾರಕ್ಕಾಗಿ ಹೋಗಿಲ್ಲ, ಅವರ ಸ್ವಾರ್ಥಕ್ಕಾಗಿ ಕೋಮುವಾದಿ ಪಕ್ಷವನ್ನು ಸೇರಿದ್ದಾರೆ. ಕೋಮುವಾದಿಗಳಿಗೆ ಈ ಬಾರಿ ದಲಿತರು ಸರಿಯಾಗಿ ಬುದ್ಧಿ ಕಲಿಸಬೇಕಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ನಗರಪಾಲಿಕೆ ಮಾಜಿ ಸದಸ್ಯ ಜಯಕುಮಾರ್, ಮಹದೇವಮೂರ್ತಿ, ರವೀಶ್, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News