ಮತ್ತೊಮ್ಮೆ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ: ವಿ.ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್

Update: 2019-12-03 16:25 GMT

ಬಾಗಲಕೋಟೆ, ಡಿ.3: ಉಪ ಚುನಾವಣೆಯ ನಂತರ ಬಿಜೆಪಿ ಸರಕಾರ ಬಹುಮತ ಕಳೆದುಕೊಳ್ಳಲಿದ್ದು, ರಾಜ್ಯದಲ್ಲಿ ಮತ್ತೊಂದು ಬಾರಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬರುವ ಸಾಧ್ಯತೆಯಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಪ್ರತಿಪಾದಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ದೂರವಿಟ್ಟು, ಸಮ್ಮಿಶ್ರ ಸರಕಾರ ರಚನೆ ಸಂಬಂಧ ಎಲ್ಲ ಬಾಗಿಲುಗಳು ಮುಕ್ತವಾಗಿವೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ. ಇದರ ನಡುವೆ ಏನು ಬೇಕಾದರೂ ನಡೆಯಬಹುದು ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎನ್ನುವುದು ಬಿಜೆಪಿಯವರ ಕಲ್ಪನೆ. ಎಲ್ಲರೂ ಒಂದೆಕಡೆ ಪ್ರಚಾರಕ್ಕೆ ಹೋದರೆ ಎಲ್ಲ ಕ್ಷೇತ್ರಗಳನ್ನು ಸುತ್ತುವುದು ಕಷ್ಟವಾದ್ದರಿಂದ ಕೆಲವೆಡೆ ಸಿದ್ದರಾಮಯ್ಯ ಒಬ್ಬರೇ ಹೋಗಿದ್ದಾರೆ. ಹಾಗೆಂದು ಅವರು ಒಬ್ಬಂಟಿ ಅಲ್ಲ ಎಂದರು.

ಉಪ ಚುನಾವಣೆಯ ಫಲಿತಾಂಶ ಏನಾಗುತ್ತದೆ ಎಂಬುದು ಈಗಾಗಲೇ ಗುಪ್ತಚರ ವರದಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪಗೆ ಗೊತ್ತಾಗಿದೆ. ತಮಗೆ ಬಹುಮತ ದೊರೆಯುವುದಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿದೆ. ಎಲ್ಲ ಊಹಾಪೋಹಗಳು ಡಿ.9ಕ್ಕೆ ಅಂತ್ಯವಾಗುತ್ತವೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News