ಮೈಸೂರು: ವೈದ್ಯೆಯ ಅತ್ಯಾಚಾರ, ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಧರಣಿ

Update: 2019-12-03 17:10 GMT

ಮೈಸೂರು,ಡಿ.3: ಹೈದರಾಬಾದ್‍ನ ಪಶುವೈದ್ಯೆ ಡಾ.ಪ್ರಿಯಾಂಕ ರೆಡ್ಡಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಬೇಕು, ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು, ಅಶ್ಲೀಲ ಸಿನಿಮಾ ಸಾಹಿತ್ಯ ಸೇರಿದಂತೆ ಅಶ್ಲೀಲ ಜಾಲತಾಣಗಳನ್ನು ಬ್ಯಾನ್ ಮಾಡಬೇಕು ಎಂಬ ಒಕ್ಕೊರಲ ಕೂಗು ಕೇಳಿಬಂತು.

ನಗರದ ರಾಮಸ್ವಾಮಿ ವೃತ್ತದಲ್ಲಿ ಮಂಗಳವಾರ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಗಟನೆ, ಪಿಯುಸಿಎಲ್, ಅಖಿಲ ಭಾರತ ಪ್ರಜಾ ರಂಗ ಸೇರಿದಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಅಧ್ಯಕ್ಷೆ ಹಾಗು ವಿಚಾರವಾದಿ ರತಿರಾವ್ ಮಾತನಾಡಿ, ಪ್ರತಿನಿತ್ಯ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರ ಕೊಲೆ ಯತ್ನಗಳು ನಡೆಯುತ್ತಿವೆ. ಇದಕ್ಕೆಲ್ಲಾ ಕಾರಣ ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ಜಾಲತಾಣಗಳು. ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‍ಫೋನ್‍ಗಳು ಇವೆ. ಅದರಲ್ಲಿ ಬರುವ ಸಂದೇಶಗಳು ಯುವಕರ ಮನಸ್ಸನ್ನು ಕೆಡಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವಂತೆ ಮಾಡುತ್ತಿವೆ. ಹಾಗಾಗಿ ಅಂತಹ ಅಶ್ಲೀಲ ಜಾಲತಾಣಗಳನ್ನು ಸರ್ಕಾರ ಬ್ಯಾನ್ ಮಾಡಬೇಕು ಎಂದು ಹೇಳಿದರು.

ಇಲ್ಲಿ ಅತ್ಯಾಚಾರ ಮಾಡಿರುವವರು ಯಾವ ಧರ್ಮಕ್ಕೆ ಸೇರಿದವನು ಎಂದು ನೋಡಬಾರದು. ಅತ್ಯಾಚಾರಿಗಳಿಗೆ ಧರ್ಮ, ಜಾತಿ, ಎಂಬುದಿಲ್ಲ, ಅವರು ಕಾಮಪಿಶಾಚಿಗಳು ಎಂದು ಕಿಡಿಕಾರಿದರು.

ಶಕ್ತಿ ಧಾಮದ ಟ್ರಸ್ಟಿ ಹಾಗೂ ವಕೀಲೆ ಸುಮನಾ ಮಾತನಾಡಿ, ನಮ್ಮ ಕಾನೂನು ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡುವವರೆಗೂ ಅತ್ಯಾಚಾರಗಳು ನಡೆಯುತ್ತವೆ. ಪ್ರಿಯಾಂಕ ರೆಡ್ಡಿ ಸೇರಿದಂತೆ ನಿರ್ಭಯಾ ಪ್ರಕರಣಕ್ಕೆ ಸರ್ಕಾರವೇ ಹೊಣೆ, ನಮ್ಮನ್ನು ಆಳುತ್ತಿರುವ ಸರ್ಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಹೇಳಿದರು.

ನಮ್ಮ ಪೊಲೀಸ್ ಇಲಾಖೆಯ 100 ಟೆಲಿಫೋನ್ ಚುರುಕಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ಎಲ್ಲಾದರೂ ತೊಂದರೆಯಾದರೆ 100ಗೆ ಕಾಲ್ ಮಾಡುತ್ತೇವೆ. ಆದರೆ ಪೊಲೀಸರು ತಕ್ಷಣ ಬರುವುದಿಲ್ಲ, ಮತ್ತೆ ಎರಡು ಬಾರಿ ಪೋನ್ ಮಾಡಿದರೆ ನಮ್ಮ ನಂಬರನ್ನೇ ಬ್ಲಾಕ್ ಮಾಡಿರುತ್ತಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸೀಮಾಮ, ಉಮದೇವಿ, ಸಿಪಿಎಂ ಬಸವರಾಜು, ಡಾ.ಲಕ್ಷ್ಮಿನಾರಾಯಣ್, ಚಂದ್ರಶೇಖರ ಮೇಟಿ, ಜಿ.ಪಿ.ಬಸವರಾಜು, ಕಾಳಚೆನ್ನೇಗೌಡ, ಜಗನ್ನಾಥ್, ನಾ.ದಿವಾಕರ, ಅಪ್ಪಾಜಿಗೌಡ, ಎಐಎಂಎಸ್‍ಎಸ್ ಸಂಧ್ಯಾ, ಗೋಪಾಲಕೃಷ್ಣ, ಕಲೀಂ, ಪಂಡಿತಾರಾಧ್ಯ, ಬಿ.ರವಿ, ಕಾದಂಬರಿಗಾರ್ತಿ ಮುಕ್ತ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News