ಯಡಿಯೂರಪ್ಪ ಸಿಎಂ ಆಗಲು ಮುಂಬಾಗಿಲಿಂದ ಬರಲೇ ಇಲ್ಲ: ಸಿದ್ದರಾಮಯ್ಯ ವ್ಯಂಗ್ಯ

Update: 2019-12-03 17:21 GMT

ಮಂಡ್ಯ, ಡಿ.3: ಯಡಿಯೂರಪ್ಪ ಸಿಎಂ ಆಗಲು ಎಂದೂ ಮುಂಬಾಗಿಲಿಂದ ಬರಲೇ ಇಲ್ಲ. 2008ರಲ್ಲೂ ಹಿಂಬಾಗಿಲಿಂದ ಬಂದರು, ಈಗಲೂ ಹಿಂಬಾಗಿಲಿನಿಂದ ಬಂದು ಸಿಎಂ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಉಪಚುನಾವಣೆ ಕೊನೆ ದಿನವಾದ ಮಂಗಳವಾರ ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ 17 ಜನ ರಾಜೀನಾಮೆ ಕೊಡದಿದ್ದರೆ ಆಪರೇಷನ್ ಕಮಲದ ಜನಕ ಯಡಿಯೂರಪ್ಪ ಸಿಎಂ ಆಗುತ್ತಿರಲೇ ಇಲ್ಲ. ಇಂತಹವರು ರಾಜಕೀಯದಲ್ಲಿ ಇರಬೇಕಾ? ಎಂದು ಪ್ರಶ್ನಿಸಿದರು.

ನೀವು ಆಶೀರ್ವಾದ ಮಾಡಿದರೆ ಕುರ್ಚಿ ಮೇಲೆ ಕೂರಬೇಕು. ಆಶೀರ್ವಾದ ಮಾಡದಿದ್ದರೆ ವಿರೋಧ ಪಕ್ಷದಲ್ಲಿ ಕೂರಬೇಕು, ಇಲ್ಲ ಮನೆಯಲ್ಲಿ ಕೂರಬೇಕು. ಜನರ ಆಶೀರ್ವಾದ ಧಿಕ್ಕರಿಸಿ ಸಿಎಂ ಸ್ಥಾನದಲ್ಲಿ ಕುಳಿತಿರುವ ಇಂತಹವರು ರಾಜಕೀಯದಲ್ಲಿ ಇರಬೇಕಾ? ಎಂದು ಅವರು ಮತದಾರರಲ್ಲಿ ಕೇಳಿದರು.

ಐದು ವರ್ಷ ಪೂರ್ಣಾವಧಿ ಸಿಎಂ ಆಗಿದ್ದವನು ನಾನು ಮಾತ್ರ. ನನ್ನ ಅವಧಿಯಲ್ಲಿ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಮಾತು ಕೊಟ್ಟಂತೆ ನಡೆದ ಸರಕಾರ ಕಾಂಗ್ರೆಸ್. ಯಡಿಯೂರಪ್ಪ ಅಕ್ಕಿ ಕಡಿಮೆ ಮಾಡಲು ಹೊರಟಿದ್ದಾರೆ.  ನಮ್ಮ ಸರಕಾರ ಬಂದ ಬಳಿಕ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇನೆ ಎಂದು ಅವರು ಹೇಳಿದರು.

ಪಕ್ಷಾಂತರಿಗಳು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದರು. ಸುಪ್ರೀಂ ಕೋರ್ಟ್ ಕೂಡ ಅನರ್ಹರು ಅಂತಾ ಆದೇಶ ನೀಡಿತು. ಸುಪ್ರೀಂ ಆದೇಶದ ನಂತರವೂ ಜನತಾ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಇವಾಗ ನೀವು ಶಾಶ್ವತವಾಗಿ ಅವರನ್ನು ನಾಲಾಯಕ್ ಅಂತ ತೀರ್ಪು ನೀಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಒಳ ಒಪ್ಪಂದ ಮಾಡಿಕೊಂಡಿಲ್ಲ:
ನಾವು ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದು ಶುದ್ಧ ಸುಳ್ಳು. ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿಯಂತೆ ನಮಗೆ ಜೆಡಿಎಸ್ ಕೂಡ ವಿರುದ್ಧ ಪಕ್ಷ. ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಅವರು ಹೇಳಿದರು.

ಮೈತ್ರಿ ಸರಕಾರದ ವೇಳೆ ನಾವು ಕುಮಾರಸ್ವಾಮಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆವು. ಅವರಿಗೆ ಆರೇಳು ಪ್ರಮುಖ ಸಚಿವ ಸ್ಥಾನ ಕೊಟ್ಟಿದ್ದೆವು. ಯಾವ ಖಾತೆ ವಿಚಾರದಲ್ಲೂ ನಾವು ಹಸ್ತಕ್ಷೇಪ ಮಾಡಿಲ್ಲ. ಈಗ ನೋಡಿದರೆ ತೊಂದರೆ ಕೊಟ್ಟರು, ಫ್ರೀಡಂ ಕೊಡಲಿಲ್ಲ ಅಂತಾರೆ ಎಂದು ಅವರು ವಿಷಾದಿಸಿದರು.

ಕಣ್ಣೀರಿಗೆ, ಅಪಪ್ರಚಾರ, ಸುಳ್ಳು ಹೇಳಿಕೆಗಳಿಗೆ ಮರುಳಾಗಬೇಡಿ. ಚಂದ್ರಶೇಖರ್ 6 ಚುನಾವಣೆ ಎದುರಿಸಿದ್ದಾನೆ. ಗೆದ್ದಿರೋದು ಮಾತ್ರ ಎರಡೇ ಚುನಾವಣೆ. ಆದರೂ ಮಾರಾಟವಾಗದೆ, ಪಕ್ಷಾಂತರ ಮಾಡದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾನೆ. ಇಂತಹವರ ಮನೆ ಹಾಳಾಗಬೇಕ? ಅಥವಾ ನಾರಾಯಣಗೌಡನಂತೆ ಮಾರಾಟ ಆಗ್ಬೇಕ? ನೀವೇ ಯೋಚಿಸಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.

 ‘ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿ ಬಂದಿದ್ದೇನೆ. ಜೆಡಿಎಸ್, ಬಿಜೆಪಿ ಎಲ್ಲೂ ಗೆಲ್ಲಲ್ಲ. ಎಲ್ಲಾ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತೆ. 9ನೇ ತಾರೀಕು ಫಲಿತಾಂಶ ಬರುತ್ತದೆ. ಅವತ್ತೇ ಯಡಿಯೂರಪ್ಪ ಕೂಡ ರಾಜೀನಾಮೆ ಕೊಡುತ್ತಾರೆ.’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News