ವೇಷ ಧರಿಸಿ ವಂಚನೆ: ನಾಲ್ವರು ನಕಲಿ ಬಾಬಾಗಳ ಬಂಧನ

Update: 2019-12-03 18:11 GMT

ಮಡಿಕೇರಿ, ಡಿ.3: ಸಾಧುಗಳ ವೇಷ ಧರಿಸಿ ಉದ್ಯಮಿಗಳನ್ನು ಹಾಗೂ ವರ್ತಕರನ್ನು ವಂಚಿಸುತ್ತಿದ್ದ ನಕಲಿ ಬಾಬಾಗಳನ್ನು ಕುಶಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನ. 24 ರಂದು ಕುಶಾಲನಗರದ ಐಬಿ ರಸ್ತೆಯ ಹಣಕಾಸು ಸಂಸ್ಥೆಗೆ ನುಗ್ಗಿ ಮಾಲಕ ಬಿ.ಎ.ನಾಗೇಗೌಡ ಎಂಬವರಿಗೆ ಔಷಧಿ ಸಿಂಪಡಿಸಿ ಬೆಲೆ ಬಾಳುವ ವಸ್ತುವನ್ನು ದೋಚಿ ಪರಾರಿಯಾದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರದ ಡಿವೈಎಸ್ಪಿ ಪಿ.ಕೆ. ಮುರಳೀಧರ್ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. 

ರಾಜಸ್ತಾನ ಮೂಲದ ವ್ಯಕ್ತಿಗಳಾದ ನಾಗನಾಥ್, ಮಜೂರ್ ನಾಥ್, ಸುರಬ್ ನಾಥ್ ಹಾಗೂ ಉಮೇಶ್ ನಾಥ್ ಎಂಬವರು ಬಂಧಿತ ಆರೋಪಿಗಳು. ವಂಚಕರಿಂದ ಒಂದು ಕಾರು, ಮೊಬೈಲ್ ಫೋನ್‍ಗಳು, ನಗದು ಹಾಗೂ ರಾಸಾಯನಿಕವನ್ನು ವಶಪಡಿಸಿಕೊಳ್ಳಲಾಗಿದೆ. 

ಆರೋಪಿಗಳು ಶ್ರವಣಬೆಳಗೊಳ ಕಡೆ ತೆರಳುತ್ತಿದ್ದ ಸಂದರ್ಭ ಕುಶಾಲನಗರ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಠಾಣಾಧಿಕಾರಿ ಹೆಚ್.ವೈ.ವೆಂಕಟರಮಣ ಹಾಗೂ ಸಿಬ್ಬಂದಿ ಕಾರು ತಪಾಸಣೆ ಮಾಡಿದರು. ಈ ಸಂದರ್ಭ ವಂಚಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಎ.ಎಸ್.ಐ. ಗೋಪಾಲ್, ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಸಜಿ, ಸುಧೀಶ್, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News