ದೇವಾಲಯದ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ: ಪ್ರಮೋದ್ ಮುತಾಲಿಕ್ ದೋಷಮುಕ್ತ

Update: 2019-12-03 18:23 GMT

ಚಿಕ್ಕಮಗಳೂರು, ಡಿ.3: ಶ್ರೀರಾಮಸೇನೆ ಸಂಘಟನೆಯ ವತಿಯಿಂದ ಕಳೆದ 2 ವರ್ಷಗಳ ಹಿಂದೆ ನಡೆದ ದತ್ತಮಾಲಾ ಅಭಿಯಾನ ಸಂದರ್ಭದಲ್ಲಿ ದತ್ತಪಾದುಕೆಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಗುಹಾಂತರ ದೇವಾಲಯದ ಪ್ರವೇಶ ದ್ವಾರದಲ್ಲಿ ಮುಖಂಡ ಪ್ರಮೋದ್‍ ಮುತಾಲಿಕ್ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಮುತಾಲಿಕ್‍ರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಪ್ರಮೋದ್‍ ಮುತಾಲಿಕ್‍ರವರ ನೇತೃತ್ವದಲ್ಲಿ ಭಕ್ತರನ್ನೊಳಗೊಂಡ ತಂಡ ಪೀಠದ ಪ್ರವೇಶದ್ವಾರದಲ್ಲಿ ದತ್ತಪಾದುಕೆಗಳ ಪೂಜೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದರಿಂದ ಭಕ್ತಾಧಿಗಳಿಗೆ ತೊಂದರೆ ಉಂಟಾಗಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದ ವಿವಾದಗಳು ನಡೆದು ನ್ಯಾಯಾಲಯ ಅಂತಿಮವಾಗಿ ಮುತಾಲಿಕ್‍ ರನ್ನು ದೋಷಮುಕ್ತ ಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಪ್ರಮೋದ್‍ ಮುತಾಲಿಕ್ ತೀರ್ಪು ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ 'ಇಂದು ನ್ಯಾಯಾಲಯ ನೀಡಿರುವ ತೀರ್ಪು ಸತ್ಯಕ್ಕೆ ಸಂದ ಜಯ. ಅಂದು ನಮ್ಮ ಮೇಲೆ ಪ್ರಕರಣ ದಾಖಲಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಶ್ ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದತ್ತಪೀಠ ಮುಕ್ತಿಗೆ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಿ
ದತ್ತಪೀಠ ವಿಚಾರವನ್ನು ಆಡಳಿತಾರೂಢ ಬಿಜೆಪಿ ಸರ್ಕಾರ ಎಷ್ಟೇ ಒತ್ತಡವಿದ್ದರೂ ಅದನ್ನು ಬದಿಗೊತ್ತಿ ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‍ ಮುತಾಲಿಕ್ ಆಗ್ರಹಿಸಿದರು.

ನ್ಯಾಯಾಲಯದ ಆವರಣದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠಗೊಳ್ಳಲು ದತ್ತಪೀಠದ ವಿಚಾರವನ್ನು ರಾಜಕೀಯ ದಾಳವನ್ನಾಗಿಸಿಕೊಂಡು ಅಧಿಕಾರಕ್ಕೆ ಬಂದಿದ್ದು ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಈ ಸಮಸ್ಯೆಯನ್ನು ಮಧ್ಯಸ್ಥಿಕೆ ಮೂಲಕವೋ ಅಥವಾ ನ್ಯಾಯಾಲಯದ ಮೂಲಕವೋ ಸಮಸ್ಯೆಯನ್ನು ಬಗೆಹರಿಸದಿದ್ದರೆ ಕಳೆದ ಹಲವು ವರ್ಷಗಳಿಂದ ದತ್ತಪೀಠ ಮುಕ್ತಿಗೆ ಹೋರಾಟ ನಡೆಸುತ್ತಿರುವ ಹೋರಾಟಗಾರರು ಭವಿಷ್ಯದಲ್ಲಿ ಹೋರಾಟದಿಂದ ವಿಮುಖರಾಗಬಹುದು ಎಂದು ಭವಿಷ್ಯ ನುಡಿದರು.

ರಾಜಕಾರಣಕ್ಕಾಗಿ ಬಿಜೆಪಿ ದತ್ತಪೀಠ ವಿಚಾರವನ್ನು ಜೀವಂತವಾಗಿರಿಸುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅದರೊಂದಿಗೆ ದತ್ತಪೀಠದ ಫಲಾನುಭವಿ ಸಿ.ಟಿ ರವಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಅವರು ದತ್ತಪೀಠ ಮುಕ್ತಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಪರಿಹಾರಕ್ಕೆ ಗಂಭೀರವಾಗಿ ಯತ್ನಿಸಲಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News