ವೈದ್ಯೆಯ ಅತ್ಯಾಚಾರ, ಕೊಲೆಗೆ ಖಂಡನೆ: ದಾವಣಗೆರೆಯಲ್ಲಿ ಎಐಎಂಎಸ್ಎಸ್, ಎಐಡಿಎಸ್ಒ ಪ್ರತಿಭಟನೆ

Update: 2019-12-03 18:28 GMT

ದಾವಣಗೆರೆ, ಡಿ.3: ಹೈದರಬಾದ್ ನಲ್ಲಿ ನಡೆದ ಡಾ.ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಆಶ್ರಯದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು ಇಲ್ಲಿನ ಗಾಂಧಿವೃತ್ತದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.  

ಈ ವೇಳೆ ಎಐಎಂಎಸ್‍ಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ ಕುಕ್ಕವಾಡ ಮಾತನಾಡಿ, ಸಮಾಜದಲ್ಲಿ ದಿನೇ ದಿನೇ ಇಂತಹ ಘಟನೆಗಳು ಹೆಚ್ಚಾಗುತ್ತವೆ. ಇದು ಸರ್ಕಾರಗಳ ಮತ್ತು ನ್ಯಾಯಾಲಯಗಳ ನಿರ್ಲಕ್ಷತನವನ್ನು ತೋರಿಸುತ್ತದೆ. ನಿರ್ಭಯಾ ಘಟನೆ ನಡೆದ ನಂತರ ಜಸ್ಟಿಸ್ ವರ್ಮಾ ಆಯೋಗ ಶಿಫಾರಸ್ಸು ಮಾಡಿದ ಸಲಹೆಗಳನ್ನು ಇದುವರೆಗೂ ಜಾರಿಗೊಳಿಸಿಲ್ಲ, ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ, ಇಂತಹ ಘಟನೆಗಳಿಂದ ಸಮಾಜ ಇನ್ನು ಅದೋಗತಿಗೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿವೈಓನ ಜಿಲ್ಲಾ ಉಪಾಧ್ಯಕ್ಷ ಮಧುತೋಗಲೇರಿ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ, ಅತ್ಯಾಚಾರ ನಡೆದ ನಂತರ ಆರೋಪಿಗಳಿಗೆ ರಕ್ಷಣೆ ಸಿಗುತ್ತಿದೆ. ಇದು ನಮ್ಮ ದೇಶದ ದುರಂತ. ಇಂತಹ ವ್ಯವಸ್ಥೆಯಲ್ಲಿ ನಮ್ಮ ಹೆಣ್ಣು ಮಕ್ಕಳು ಬದುಕುತ್ತಿದ್ದಾರೆ. ಕೊಳೆತ ಸಮಾಜವನ್ನು ಕಿತ್ತು ಹಾಕಿ ಮಹಿಳೆಯರನ್ನು ಗೌರವಿಸುವ ಸಮಾಜವನ್ನು ನಾವೆಲ್ಲರು ಸೇರಿ ಕಟ್ಟಬೇಕಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಭಾರತಿ ಮಾತನಾಡಿ, ಯುವಕರ ನೈತಿಕ ಬೆನ್ನಲುಬನ್ನು ಮುರಿಯುವ ಉದ್ದೇಶದಿಂದ ಸರ್ಕಾರಗಳು ಅಶ್ಲೀಲ ಸಿನಿಮಾ, ಸಾಹಿತ್ಯ ಹರಿಬಿಡುತ್ತವೆ. ಇಂತಹ ಘಟನೆಗಳಿಗೆ ಸರ್ಕಾರಗಳೇ ನೇರಹೊಣೆ, ಚುನಾವಣಾ ರಾಜಕೀಯದಲ್ಲಿ ಮುಳುಗಿರುವ ಸರ್ಕಾರಗಳು ಮಹಿಳೆಯರಿಗೆ ಭದ್ರತೆ ನೀಡುವಲ್ಲಿ ವಿಫಲವಾಗಿವೆ ಎಂದರು.

ಪಿ.ಪರಶುರಾಮ್, ಅಶ್ವಿನಿ, ಸೌಮ್ಯ, ನಾಗಜ್ಯೋತಿ, ಪೂಜಾ, ತಿಪ್ಪೇಸ್ವಾಮಿ ಬನಶ್ರೀ, ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News