ಬಾಗೇಪಲ್ಲಿ: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಎಸ್‍ಎಫ್‍ಐ ಪ್ರತಿಭಟನೆ

Update: 2019-12-04 11:57 GMT

ಬಾಗೇಪಲ್ಲಿ, ಡಿ.4: ಹೈದರಾಬಾದ್ ನ ಪಶುವೈದ್ಯೆ ಡಾ.ಪ್ರಿಯಾಂಕ ರೆಡ್ಡಿ ಮತ್ತು ಜಾರ್ಖಂಡ್ ನ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ನಡೆಸಿರುವ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಎಸ್ಎಫ್ಐ ತಾಲೂಕು ಸಮಿತಿ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ಎಸ್ಎಫ್ಐ ಕಾರ್ಯಕರ್ತರು ಪಟ್ಟಣದ ಸರ್ಕಾರಿ ಬಸ್‍ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ನಂತರ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ, ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಎ.ಸೋಮಶೇಖರ್, ದೇಶದಲ್ಲಿ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ, ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿದ್ದರೂ ಸಹ ಯಾವುದೇ ಸರ್ಕಾರಗಳು ಮಹಿಳೆಯರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ನ್ಯಾಯಾಲಯ ಹಾಗೂ ಕಾನೂನಿನ ಭಯ ಇಂತಹ ಅಪರಾಧಿಗಳಿಗೆ ಇಲ್ಲವಾಗಿದೆ. ನಿರ್ಭಯಾ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳಿಗೆ ಇನ್ನೂ ಶಿಕ್ಷೆ ವಿಧಿಸಿಲ್ಲ. ಈ ನಿಟ್ಟಿನಲ್ಲಿ ಅಪರಾಧಿಗಳು ಇಂತಹ ಇನ್ನಷ್ಟು ಹೇಯ ಕೃತ್ಯಗಳನ್ನು ಮಾಡಲು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ. ಅಪರಾಧಿಗಳು ಯಾರೇ ಆದರೂ ಅವರನ್ನು ಕಠಿಣವಾಗಿ ಶಿಕ್ಷೆಗೆ ಒಳಪಡಿಸುವಂತಹ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಾಗ ಮಾತ್ರ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ಡಾ.ಪ್ರಿಯಾಂಕ ರೆಡ್ಡಿ ಮತ್ತು ಕಾನೂನು ವಿದ್ಯಾರ್ಥಿನಿಯ ಪ್ರಕರಣದಲ್ಲಿನ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ದೇಶದಲ್ಲಿ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ನಂತರ ಪ್ರತಿಭಟನಕಾರರು ತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಉಪಾದ್ಯಕ್ಷ ರಾಕೇಶ್, ಮುಖಂಡರಾದ ತರುಣ್, ವೈ.ಎಸ್.ರಮೇಶ್, ಮನ್ಸೂರ್, ಗೌತಮಿ, ಲಕ್ಷ್ಮೀ, ಸುಕನ್ಯ, ಅರುಣಾ, ಧನುಜಯ, ಅನಿಲ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News