‘ಅನರ್ಹ'ರ ಭವಿಷ್ಯ ಬರೆಯಲು ಸಜ್ಜಾದ ಮತದಾರ: ರಾಜ್ಯದ 15 ಕ್ಷೇತ್ರಗಳಲ್ಲಿ ನಾಳೆ ಮತದಾನ

Update: 2019-12-04 16:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 4: ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ನಾಳೆ(ಡಿ.5) ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. ‘ಅನರ್ಹರು’ ಸೇರಿ 165 ಘಟಾನುಘಟಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ.

ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಚುನಾವಣಾ ಸಿಬ್ಬಂದಿ ಡಿ.4ರ ಸಂಜೆಯೇ ಇವಿಎಂ ಯಂತ್ರ, ಬ್ಯಾಲೆಟ್ ಯುನಿಟ್, ಕೌಂಟಿಂಗ್ ಯುನಿಟ್, ವಿವಿ ಪ್ಯಾಟ್‌ಗಳೊಂದಿಗೆ ಮತಗಟ್ಟೆಗೆ ತೆರಳಿದ್ದಾರೆ.

ಮತದಾನದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮತಗಟ್ಟೆ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅರೆಸೇನಾ ಪಡೆ, ಸ್ಥಳೀಯ ಪೊಲೀಸ್ ಸಿಬ್ಬಂದಿ ಜತೆಗೆ ಕ್ಷಿಪ್ರ ಕಾರ್ಯಪಡೆಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ರಾಜ್ಯದ 15 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಜೆಡಿಎಸ್-12, ಬಿಎಸ್ಪಿ-2, 75 ಮಂದಿ ಪಕ್ಷೇತರರು ಸೇರಿದಂತೆ 156 ಪುರುಷ ಹಾಗೂ 9 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹದಿನೈದು ಕ್ಷೇತ್ರಗಳಲ್ಲಿ ಸುಗಮ ಮತದಾನಕ್ಕೆ 4,185 ಮತಗಟ್ಟೆಗಳ ಸ್ಥಾಪಿಸಿದ್ದು, ಆ ಪೈಕಿ 884 ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ. 18,52,027 ಮಂದಿ ಮಹಿಳೆ, 19,25,529 ಮಂದಿ ಪುರುಷ, 79,714 ಮಂದಿ ನವ ಮತದಾರರು ಸೇರಿದಂತೆ 414 ಮಂದಿ ಇತರೆ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಶಿವಾಜಿನಗರ, ಹೊಸಕೋಟೆ, ಹುಣಸೂರು, ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.

206 ಮತಗಟ್ಟೆಯಲ್ಲಿ ವೆಬ್‌ಕಾಸ್ಟಿಂಗ್, 259 ಮತಗಟ್ಟೆಗಳಲ್ಲಿ ವಿಡಿಯೊ ಚಿತ್ರೀಕರಣ, 805 ಮೈಕ್ರೋ ಅಬ್ಸರ್ವರ್, 900 ವೀಕ್ಷಕರನ್ನು ನೇಮಿಸಲಾಗಿದೆ. 19,299 ಮತಗಟ್ಟೆ ಅಧಿಕಾರಿಗಳು 42,509 ಸಿಬ್ಬಂದಿಯನ್ನು ಕರ್ತವ್ಯಕ್ಕೆ ಆಯೋಗ ನಿಯೋಜಿಸಿದೆ. ಭದ್ರತೆಗೆ 11,241 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಮತದಾನ ನಡೆಯುವ ಕ್ಷೇತ್ರಗಳಲ್ಲಿ ವೇತನ ಸಹಿತ ರಜೆ ಘೋಷಣೆ ಮಾಡಿದ್ದು, ಗುರುತಿನ ಚೀಟಿ ಇಲ್ಲದ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಡ್ರೈವಿಂಗ್ ಲೈಸೆನ್ಸ್, ಪಾನ್‌ಕಾರ್ಡ್, ನರೇಗಾ ಜಾಬ್‌ ಕಾರ್ಡ್, ಪಾಸ್ ಪೋರ್ಟ್, ಆಧಾರ್ ಸೇರಿ ಭಾವಚಿತ್ರ ಇರುವ 11 ಗುರುತಿನ ಚೀಟಿ ತೋರಿಸಿ ಹಕ್ಕು ಚಲಾಯಿಸಬಹುದು.

ಆಮಿಷವೊಡ್ಡಿದರೆ ಕ್ರಮ: ಮತದಾರರಿಗೆ ಹಣ, ಮದ್ಯ ಸೇರಿ ಯಾವುದೇ ಆಮಿಷವೊಡ್ಡುವುದು. ಇಂತಹವರಿಗೆ ಮತ ಹಾಕುವಂತೆ ಬೆದರಿಕೆ ಹಾಕಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.

ಮನವೊಲಿಕೆ: ಹದಿನೈದು ದಿನಗಳಿಂದ ಸಿಎಂ ಬಿಎಸ್‌ವೈ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಕುಮಾರಸ್ವಾಮಿ ಹಗಲು-ರಾತ್ರಿಗಳ ಪರಿವೆ ಮರೆತು ಪ್ರಚಾರ ನಡೆಸಿದ್ದರು. ನಿನ್ನೆ ಬಹಿರಂಗ ಪ್ರಚಾರ ಮುಕ್ತಾಯದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಮತದಾರರ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿದರು.

ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ್, ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಶರತ್ ಬಚ್ಚೇಗೌಡ, ಎಚ್.ವಿಶ್ವನಾಥ್, ಕೆ.ಬಿ.ಕೋಳಿವಾಡ, ಬಿ.ಸಿ.ಪಾಟೀಲ್, ರಿಝ್ವನ್ ಅರ್ಶದ್ ಸೇರಿದಂತೆ ಹಲವು ಅಭ್ಯರ್ಥಿಗಳ ಕಣದಲ್ಲಿದ್ದಾರೆ.

‘ಉಪಚುನಾವಣೆಗೆ ನಾಳೆ(ಡಿ.5) ಬೆಳಗ್ಗೆ 7ರಿಂದ ಮತದಾನ ಆರಂಭವಾಗಲಿದ್ದು, ಮಳೆ, ಗಾಳಿ, ಚಳಿಯನ್ನು ಲೆಕ್ಕಿಸಿದೆ ಶೇ.85ರಷ್ಟು ಮತದಾನ ಮಾಡುವ ಮೂಲಕ ಮತದಾರರು ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು’

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News