ಸೋಲಿನ ಭೀತಿಯಿಂದ ಬಿಜೆಪಿ ವಿಚಲಿತವಾಗಿದೆ: ಕಾಂಗ್ರೆಸ್ ಟೀಕೆ

Update: 2019-12-04 15:45 GMT

ಬೆಂಗಳೂರು, ಡಿ.4: ಬಿಜೆಪಿಯ ಮುಂಚೂಣಿ ಘಟಕಗಳ ರೀತಿ ಕೆಲಸ ಮಾಡುವ ಐಟಿ ಇಲಾಖೆ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಚುನಾವಣಾ ಸಮಯದಲ್ಲಿ ದಾಳಿ ಮಾಡುತ್ತದೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್‌ನಲ್ಲಿ ಟೀಕಿಸಿದೆ.

ಬಿಜೆಪಿಯ ಯಾವೊಬ್ಬ ನಾಯಕರ ಮೇಲೂ ದಾಳಿ ನಡೆಯುವುದೇ ಇಲ್ಲ. ಸೋಲುವ ಭೀತಿ, ಡಿಸೆಂಬರ್ 9 ರಂದು ಸರಕಾರ ಬೀಳುವ ಮನವರಿಕೆ ಆದ ಮೇಲೆ ಬಿಜೆಪಿ ವಿಚಲಿತವಾಗಿದೆ ಎಂದು ತಿಳಿಸಿದೆ.

ಅನರ್ಹರ ಸೋಲು ಕರ್ನಾಟಕದ ಗೆಲುವು ನಿಶ್ಚಿತ. ಹಣ ಮತ್ತು ಅಧಿಕಾರಕ್ಕಾಗಿ ಮಾರಾಟಗೊಂಡ ಅನರ್ಹರಿಗೆ ಆಕ್ರೋಶಗೊಂಡ ಜನ ಚಪ್ಪಲಿಯಲ್ಲಿ ಹೊಡೆದರು, ಛೀಮಾರಿ ಹಾಕಿದರು, ಧಿಕ್ಕಾರ ಕೂಗಿದರು, ಬಹಿಷ್ಕಾರ ಹಾಕಿದರು, ಸೋಲುವ ಭೀತಿಯ ಬಿಜೆಪಿ ಮತ್ತೆ ಆಪರೇಷನ್ ಕಮಲದ ಮಾತೆತ್ತುತ್ತಿದೆ. ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾಗಿರುವ ರಾಜ್ಯ ಬಿಜೆಪಿಯ ವಿರುದ್ಧ ಜನಾಕ್ರೋಶ ತಿರುಗಲಿದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ಕೊನೆಗೂ ಸತ್ಯಕ್ಕೆ ಮೇಲುಗೈಯಾಗಿದೆ. 106 ದಿನಗಳ ಸೆರೆವಾಸದ ನಂತರ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಸುಪ್ರೀಂಕೋರ್ಟ್ ಹೈಕೋರ್ಟಿನ ಜಾಮೀನು ನಿರಾಕರಣೆಯನ್ನು ಟೀಕಿಸುವುದರೊಂದಿಗೆ ರದ್ದು ಮಾಡಿದೆ. ಬಿಜೆಪಿ ಮಾಡುತ್ತಿರುವ ತನಿಖಾ ಸಂಸ್ಥೆಗಳ ದುರುಪಯೋಗ ದ್ವೇಷ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News