ಮಹಿಳೆಯನ್ನು ಕಾಲುವೆಗೆ ತಳ್ಳಿ ಹತ್ಯೆಗೈದ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2019-12-04 16:20 GMT

ಕಲಬುರಗಿ, ಡಿ.4: ಸಾಲ ಮರುಪಾವತಿಸಲು ಒತ್ತಾಯಿಸಿದ ಮಹಿಳೆಯನ್ನು ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ. ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ ಕಲಬುರಗಿ 1ನೆ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಆರೋಪ ಸಾಬೀತುಗೊಂಡ ಹಿನ್ನೆಲೆ ಅಪರಾಧಿಗಳಾದ ಸಿಂಧಗಿ ತಾಲೂಕಿನ ಮೋರಟಗಿ ಗುರುಪಾದಪ್ಪ ಹಾಗೂ ಚೆನ್ನಬಸಪ್ಪಗುರುಪಾದ ಅವರಿಗೆ ತಲಾ 10 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ, ನ್ಯಾಯಾಧೀಶ ಶುಕಲಾಕ್ಷ ಪಾಲನ್ ತೀರ್ಪು ನೀಡಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ಪಾರ್ವತಿ ಪಾಟೀಲ ಎನ್ನುವ ಮಹಿಳೆಯಿಂದ ಗುರುಪಾದಪ್ಪ 2 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಪಾರ್ವತಿ ತನ್ನ ಪತಿಯೊಂದಿಗೆ ಗುರುಪಾದಪ್ಪನ ಮನೆಗೆ ತೆರಳಿದ್ದ ವೇಳೆ ಗುರುಪಾದಪ್ಪ ಮತ್ತು ಚೆನ್ನಪ್ಪ ಇಬ್ಬರು ಸೇರಿ ಮಹಿಳೆ ಹಾಗೂ ಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು. ಆನಂತರ ಗುರುಪಾದಪ್ಪ ಹಣ ನೀಡುವುದಾಗಿ ಪಾರ್ವತಿ ಪಾಟೀಲ್‌ಗೆ ತಿಳಿಸಿ ಆಕೆಯನ್ನು ಚಿಗರಹಳ್ಳಿ ಸಂಬಂಧಿಕರಿಂದ ಹಣ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದ ಈ ವೇಳೆ ಮುದಬಾಳ ಬಳಿಯ ಕಾಲುವೆಯಲ್ಲಿ ಪಾರ್ವತಿ ನೀರು ಕುಡಿಯಲು ಕುಳಿತಾಗ ಆಕೆಯನ್ನು ಕಾಲುವೆಗೆ ತಳ್ಳಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News