ಧಾರವಾಡ ಜಿ.ಪಂ. ಸದಸ್ಯನ ಹತ್ಯೆ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ನಿರ್ದೇಶನ

Update: 2019-12-04 16:45 GMT

ಬೆಂಗಳೂರು, ಡಿ.4: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಕಾರ್ಯಕರ್ತ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ನಿರ್ದೇಶಿಸಿದೆ. 

ಸಿಬಿಐ ತನಿಖೆ ರದ್ದು ಕೋರಿ ಬಸವರಾಜ ಶಿವಪ್ಪ ಮುತ್ತಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದಿಸಿದ ವಕೀಲ ಶಶಿಕಿರಣ ಶೆಟ್ಟಿ ಅವರು, ಈ ಪ್ರಕರಣಕ್ಕೆ ಸಂಬಂದಿಸಿದಂತೆ ಹೈಕೋರ್ಟ್ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿದ್ದರೂ ಧಾರವಾಡ ಪೊಲೀಸರು ಆರೋಪಿ ಸಂತೋಷ ಸವದತ್ತಿಯನ್ನು ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.

ಈ ಕ್ರಮ ಕಾನೂನು ಬಾಹಿರವಾಗಿದೆ ಈ ಮೂಲಕ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿದರು. ಈ ಆಕ್ಷೇಪಣೆಯನ್ನು ಅಲ್ಲಗೆಳೆದ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಅವರು, ಆರೋಪಿ ಸಂತೋಷ ಸವದತ್ತಿಯನ್ನು 2019ರ ನ.20ರಂದು ಬಂಧಿಸಲಾಗಿದೆ ಮತ್ತು ಮರುದಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಸಂತೋಷನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ತನಿಖಾಧಿಕಾರಿಯು, ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದನ್ನು ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಹೈಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ ಎಂದರು.

ಆರೋಪಿ ಜಾಮೀನು ಅರ್ಜಿಯನ್ನೇ ಹಾಕಿಲ್ಲ. ಆತ ನ್ಯಾಯಾಂಗ ವಶದಲ್ಲಿ ಇದ್ದಾನೆ ಮತ್ತು ಹೈಕೋರ್ಟ್ ಆದೇಶವನ್ನು ಕೋರ್ಟ್ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣದ ಕಡತ ಹಾಗೂ ದಾಖಲೆಗಳನ್ನು ಮುಖ್ಯ ನ್ಯಾಯಮೂರ್ತಿ ಮತ್ತು ಧಾರವಾಡ ಜಿಲ್ಲಾ ಆಡಳಿತ ಹೊಣೆ ಹೊತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ಆದೇಶಿಸಿದರು. ಅಲ್ಲಿಯವರೆಗೂ ಸಿಬಿಐ ತನಿಖೆಗೆ ಈ ಹಿಂದೆ ನೀಡಲಾದ ಮಧ್ಯಂತರ ತಡೆ ಆದೇಶವನ್ನು ಡಿ.16ರವರೆಗೆ ವಿಸ್ತರಿಸಿದರು. ಈ ಪ್ರಕರಣದ ಕುರಿತು ಸರಕಾರದ ಪರವಾಗಿ ಅಗತ್ಯ ಸಲಹೆ ಹಾಗೂ ಮಾಹಿತಿ ನೀಡಲು ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿದರು. ವಿಚಾರಣೆ ವೇಳೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಶೀಲವಂತ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News