ಡಿ.6 ರಂದು ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ

Update: 2019-12-05 11:53 GMT

ಮಡಿಕೇರಿ, ಡಿ.5: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನವಾದ ಡಿ.6 ರಂದು ಮತೀಯ ಸೂಕ್ಷ್ಮ ಜಿಲ್ಲೆ ಕೊಡಗಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿ 12 ಗಂಟೆಯ ವರೆಗೆ 144 ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ. ವಿಜಯೋತ್ಸವ ಆಚರಿಸಬಾರದು ಮತ್ತು ಪಟಾಕಿಗಳನ್ನು ಸಿಡಿಸಬಾರದು ಸೇರಿದಂತೆ ವಿವಿಧ ನಿಯಮಗಳನ್ನು ಸೂಚಿಸಲಾಗಿದೆ. 

ಪಾಲಿಸಬೇಕಾದ ಷರತ್ತುಗಳು
ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ, ವಾರದ ಸಂತೆ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಮತ್ತು ದೇವಸ್ಥಾನ, ಪೂಜಾ ಮಂದಿರ, ಚರ್ಚ್, ಮಸೀದಿಗಳಲ್ಲಿ ನಡೆಯುವ ಪ್ರತಿ ನಿತ್ಯದ ಪ್ರಾರ್ಥನೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆಯನ್ನು ನಿಷೇಧಿಸಿದೆ. 

ಎಲ್ಲಾ ಸಾರ್ವಜನಿಕ, ರಾಜಕೀಯ ಬಹಿರಂಗ ಸಭೆ, ಸಮಾರಂಭ, ಪ್ರಚೋದನಾಕಾರಿ ಹೇಳಿಕೆ, ಭಾಷಣ, ಮೆರವಣಿಗೆ, ಜಾಥಾ, ಧರಣಿ, ಮುಷ್ಕರ, ರಸ್ತೆ ತಡೆ ಹಾಗೂ ಮುತ್ತಿಗೆ ಮುಂತಾದುವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ವಿಜಯೋತ್ಸವ, ಪ್ರತಿಭಟನೆ ನಡೆಸುವುದು, ಪಟಾಕಿ ಸಿಡಿಸುವುದು, ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುವುದು ಮತ್ತು ಕಪ್ಪು ಅಥವಾ ಯಾವುದೇ ಪ್ರಚೋಧನಾಕಾರಿ ಬಾವುಟ ಪ್ರದರ್ಶಿಸುವುದು, ಪ್ರಚೋಧನಾತ್ಮಕ ಘೋಷಣೆ ಕೂಗುವುದು, ವಾಹನಗಳಲ್ಲಿ ಪ್ರಚೋಧನಾತ್ಮಕ ಫಲಕ, ಬಾವುಟಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದೆ. ಯಾವುದೇ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕರಪತ್ರ, ಭಿತ್ತಿಪತ್ರ ಬಳಸುವುದು, ಅಂಟಿಸುವುದು ಅಥವಾ ಹಂಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. 

ನಿಷೇಧಿತ ಅವಧಿಯಲ್ಲಿ 5 ಮತ್ತು ಅದಕ್ಕಿಂತ ಮೇಲ್ಪಟ್ಟು ಜನರು ಗುಂಪು ಸೇರಬಾರದು. ಸರ್ಕಾರಿ ಕರ್ತವ್ಯದ ನಿಮಿತ್ತ ಮತ್ತು ಬ್ಯಾಂಕ್, ಎಟಿಎಂ ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿಗಳನ್ನು ಹೊರತುಪಡಿಸಿ, ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಆಯುಧ,  ಮಾರಣಾಂತಿಕ ಆಯುಧಗಳನ್ನು ಹೊಂದಿರುವುದು, ಪ್ರದರ್ಶಿಸುವುದು ಅಥವಾ ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News