ತುಮಕೂರು: ಅನುಮಾನಗಳಿಗೆ ಎಡೆಮಾಡಿಕೊಟ್ಟ ಸ್ಮಾರ್ಟ್ ಸಿಟಿ ಕಾಮಗಾರಿ ಸಾಮಾಗ್ರಿಗೆ ಬೆಂಕಿ

Update: 2019-12-05 12:13 GMT

ತುಮಕೂರು,ಡಿ.5: ಸ್ಮಾರ್ಟ್‍ಸಿಟಿ ಕಾಮಗಾರಿ ಕಳಪೆಯಾಗುತ್ತಿದೆ ಎಂದು ಸಾರ್ವಜನಿಕರು, ರಾಜಕಾರಣಿಗಳು ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೆ, ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ತಂಡವನ್ನು ರಚಿಸಿದ್ದು, ಸ್ಮಾರ್ಟ್‍ಸಿಟಿ ಕಾಮಗಾರಿ ಸಾಮಾಗ್ರಿಗೆ ಬೆಂಕಿ ಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಗರದ ಡಿಡಿಪಿಐ ಕಚೇರಿ ಪಕ್ಕದಲ್ಲಿ ಸಂಗ್ರಹಿಸಿದ್ದ ಗ್ಯಾಸ್‍ಪೈಪ್‍ಗಳಿಗೆ ಮಂಗಳವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಭಸ್ಮವಾಗಿದ್ದು, ಆಂಧ್ರ ಮೂಲದ ಗುತ್ತಿಗೆದಾರರು ಇದನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದ್ದು, ತಡರಾತ್ರಿ ಬೆಂಕಿಬಿದ್ದಿದ್ದರಿಂದ ಬಹುತೇಕ ಪೈಪ್‍ಗಳು ಹಾನಿಯೊಳಗಾಗಿವೆ.

ಬಯಲಲ್ಲಿ ಬೆಂಕಿ: ಡಿಡಿಪಿಐ ಕಚೇರಿ ಬಳಿ ಇರುವ ಖಾಲಿ ಜಾಗದಲ್ಲಿ ಪೈಪ್ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದ್ದು, ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಅಲ್ಲಿಯೇ ವಾಸಿಸುತ್ತಿರುವ ಕೆಲಸಗಾರರು ಹೇಳಿದ್ದಾರೆ. ಚಳಿಗಾಲದಲ್ಲಿ ತಡರಾತ್ರಿ ಆಕಸ್ಮಿಕ ಹೊತ್ತಿಕೊಂಡಿತೆ ? ಎನ್ನುವುದು ಈಗ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಚಳಿಗಾಳಿ ವಿಪರೀತವಾಗಿದ್ದು, ಹೀಗಾಗಿ ಆಕಸ್ಮಿಕವಾಗಿ ಬೆಂಕಿಹೊತ್ತು ಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದು, ಸ್ಮಾರ್ಟ್‍ಸಿಟಿ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಯುತ್ತಿರಬೇಕಾದರೆ ಈ ರೀತಿಯ ಅವಘಡವಾಗಿರುವುದಕ್ಕೆ ಕಾರಣ ಇದೆಯೇ? ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಮಾಜಿ ಸಚಿವರ ಭೇಟಿ: ಮೊದಲಿನಿಂದಲೂ ಸ್ಮಾರ್ಟ್‍ಸಿಟಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು, ಬೆಂಕಿ ಹೊತ್ತಿಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಪೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳನ್ನು ವ್ಯಕ್ತಪಡಿಸಿದ್ದ ಅವರು, ಸ್ಮಾರ್ಟ್‍ಸಿಟಿ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಸಿಎಂ ಅವರಿಗೆ ಪತ್ರವನ್ನು ಬರೆದಿದ್ದರು.

ಈ ಬೆಂಕಿ ಅವಘಡದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ಸ್ಮಾರ್ಟ್‍ಸಿಟಿ ಕಾಮಗಾರಿ ಸಾವಿರಾರು ಕೋಟಿ ಜನರ ಹಣದಿಂದ ಮಾಡುತ್ತಿದ್ದು, ಬೆಂಕಿ ಅವಘಡ ನಡೆದಿರುವ ಜಾಗದ ಪಕ್ಕದಲ್ಲಿಯೇ ಡಿಡಿಪಿಐ ಕಚೇರಿ, ಹಾಸ್ಟೆಲ್, ಕಾಲೇಜುಗಳು, ಮನೆ ಇವೆ ಇಂತಹ ಸ್ಥಳದಲ್ಲಿ ಬೆಂಕಿ ಅವಘಡ ನಡೆದಿರುವುದು ಆತಂಕದ ವಿಚಾರವಾಗಿದೆ. ಈ ವಿಚಾರವಾಗಿ ತನಿಖೆಯಾಗಲೇ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ನಡುವೆಯೇ ಇದೀಗ ಪಿವಿಸಿ ಪೈಪ್ ಗಳು ಬೆಂಕಿಯಲ್ಲಿ ಸುಟ್ಟ ಭಸ್ಮವಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯ ಪೈಪ್ ಗಳು ಸುಟ್ಟು ಕರಕಲಾಗಿದ್ದರೂ ಸ್ಥಳಕ್ಕೆ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತ, ಯಾರೂ ಬಂದು ನೋಡಿಲ್ಲ. ಇದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.

ಅನಾಹುತದಿಂದ ಕಾರ್ಮಿಕರು ಮತ್ತ ಸ್ಥಳೀಯರು ಪಾರಾಗಿದ್ದಾರೆ. ಅದು ನಮ್ಮ ಪುಣ್ಯ. ಬೆಂಕಿ ಜ್ವಾಲೆ ಮನೆಗಳಿಗೆ ತಗುಲಿದ್ದರೆ ಸ್ಮಾರ್ಟ್ ಸಿಟಿ ಹೋಗಿ ಸ್ಮಶಾನ ಸಿಟಿ ಆಗುತ್ತಿತ್ತು. ಬೆಂಕಿ ಹೊತ್ತಿ ಉರಿದರೂ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ಇಟ್ಟಿಲ್ಲ. ಪೊಲೀಸರು ಗಸ್ತು ತಿರುಗಿಲ್ಲ. ಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಘಟನೆಯೇ ನಡೆದಿಲ್ಲವೆಂಬಂತೆ ಸುಟ್ಟಜಾಗವನ್ನು ಮಣ್ಣಿನಿಂದ ಮುಚ್ಚಿ ಹೋಗಿದ್ದಾರೆ. ಇದು ಘಟನೆಯನ್ನು ಮುಚ್ಚಿ ಹಾಕುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

ಪೈಪ್‍ಗೆ ಬೆಂಕಿ ತಗುಲಿದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಗೋಡೆಗಳು ಸುಟ್ಟು ಹೋಗಿವೆ. ಡಿಡಿಪಿಐ ಈ ಬಗ್ಗೆ ಸೂಮೋಟೋ ದೂರು ದಾಖಲಿಸಬೇಕಿತ್ತು. ಅವರು ಕೂಡ ಇತ್ತ ತಿರುಗಿಯೂ ನೋಡಿಲ್ಲ. ಇಲ್ಲಿ ಯಾರಿಗೂ ಜನರ ಬಗ್ಗೆ ಕಾಳಜಿ ಇಲ್ಲ. ಪೈಪುಗಳು ಸುಟ್ಟು ಹೋದ ಬಗ್ಗೆ ಕಿಂಚಿತ್ತೂ ಗಮನವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಈ ವೇಳೆ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News