ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ: ಸಿದ್ದರಾಮಯ್ಯ ವಾಗ್ದಾಳಿ

Update: 2019-12-05 17:46 GMT

ಬಾಗಲಕೋಟೆ, ಡಿ. 5: ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿಯವರು ಸುಖಾಸುಮ್ಮನೆ ನಾವು ಅದು ಮಾಡುತ್ತೇವೆ, ಇದು ಮಾಡುತ್ತೇವೆಂದು ಬುರುಡೆ ಬಿಡುತ್ತಾರೆ. ಆದರೆ, ಅವರು ಏನೂ ಮಾಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ಸರಕಾರಿ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಹಾಲು, ಶೂ, ವಿದ್ಯಾಸಿರಿ, ಅನ್ನಭಾಗ್ಯ ಯೋಜನೆ ನೀಡಿದ್ದೇವೆ. ಆದರೆ, ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೇರಿದೆ. ನಾವೇ ಅಧಿಕಾರದಲ್ಲಿದ್ದರೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡಲು ಉದ್ದೇಶಿಸಿದ್ದೆವು ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಉಚಿತ ಬಸ್ ಪಾಸ್ ಘೋಷಿಸಿದ್ದೆ. ಬಜೆಟ್‌ನಲ್ಲಿಯೂ ಅನುದಾನ ಮೀಸಲಿಡಲಾಗಿತ್ತು. ಆದರೆ, ನಾವು ಅಧಿಕಾರ ಕಳೆದುಕೊಂಡೆವು. ಆದರೂ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ವಹಿಸಿದ್ದೇನೆ ಎಂದರು.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಯೋಜನೆ, ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆ ಮೈತ್ರಿ ಸರಕಾರದಲ್ಲಿ ಪ್ರಸ್ತಾಪಿಸಿದೆವು. ಆದರೆ, ಅದು ಜಾರಿಯಾಗಲಿಲ್ಲ. ಕೆರೂರು ಪಟ್ಟಣಕ್ಕೆ ಪಿಯು ಕಾಲೇಜು ಅಗತ್ಯವಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದರು.

ಆರೋಗ್ಯ ಸಚಿವರಿಗೆ ಪತ್ರ: ಪಟ್ಟಣಕ್ಕೆ ಸರಕಾರಿ ಆಸ್ಪತ್ರೆ ನೀಡುವ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪತ್ರ ಬರೆಯುತ್ತೇನೆ ಎಂದ ಅವರು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

‘ಉಪಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ಮಾಡಲು ಮುಂದಾದರೆ ರಾಜ್ಯದ ಜನ ಬಿಜೆಪಿಯವರನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ. ಸಿದ್ದರಾಮಯ್ಯ ಏಕಾಂಗಿ ಎಂಬುದೆಲ್ಲಾ ಸುಳ್ಳು. ಬಿಜೆಪಿಯವರು ಪ್ರಚಾರಕ್ಕಾಗಿ ಹಾಗೆಲ್ಲ ಪ್ರಚಾರ ನಡೆಸಿದ್ದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News