ಕರ್ತವ್ಯಲೋಪ ಆರೋಪ: ಮತಗಟ್ಟೆ ಅಧಿಕಾರಿ ಅಮಾನತು

Update: 2021-03-12 12:28 GMT

ಬೆಳಗಾವಿ, ಡಿ.5: ಉಪಚುನಾವಣೆಯ ಹಿನ್ನೆಲೆಯಲ್ಲಿ ಗೋಕಾಕ್ ವಿಧಾನಸಭಾ ಕರ್ತವ್ಯಕ್ಕೆ ನೇಮಿಸಲಾಗಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ಪಾನಮತ್ತರಾಗಿ ಆಗಮಿಸಿದ್ದರಿಂದ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

ಸವದತ್ತಿ ತಾಲೂಕಿನ ತೆಂಗಿನಹಾಳ ರಾಯಣ್ಣ ನಗರದ ಪ್ರಾಥಮಿಕ ಶಾಲೆಯ ಶಿಕ್ಷಕ ವೀರಭದ್ರಪ್ಪನಾಶಿಪುಡಿ ಅವರನ್ನು ಗೋಕಾಕ್ ವಿಧಾನಸಭಾ ಮತಗಟ್ಟೆ ಸಂಖ್ಯೆ 231 ಕ್ಕೆ ಮತಗಟ್ಟೆ ಅಧಿಕಾರಿ(ಪಿ.ಓ)ಯಾಗಿ ನಿಯೋಜಿಸಲಾಗಿತ್ತು. ಇವರು ಚುನಾವಣಾ ಕೇಂದ್ರಕ್ಕೆ ಮದ್ಯಪಾನ ಮಾಡಿಕೊಂಡು ಬಂದು ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವೀರಭದ್ರಪ್ಪನಾಶಿಪುಡಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮದ್ಯಪಾನ ಮಾಡಿರುವುದು ಸಾಬಿತಾಗಿದ್ದು, ಮುಂದಿನ ತಪಾಸಣೆ ಮಾಡುವ ಸಮಯದಲ್ಲಿ ಆಸ್ಪತ್ರೆಯಿಂದ ಓಡಿ ಹೋಗಿದ್ದಾರೆಂದು ವೈದ್ಯಾಧಿಕಾರಿ ವರದಿ ನೀಡಿದ್ದಾರೆ.

ಮದ್ಯಪಾನ ಮಾಡಿ ಚುನಾವಣೆಯ ಮಹತ್ವದ ಕಾರ್ಯಕ್ಕೆ ಅಡ್ಡಿಯುಂಟು ಮಾಡಿದ್ದರಿಂದ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 134 ನ್ನು ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1946 ರ ನಿಯಮವನ್ನು ಉಲ್ಲಂಘನೆ ಮಾಡಿರುವ ವೀರಭದ್ರಪ್ಪನಾಶಿಪುಡಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಬೊಮ್ಮನಹಳ್ಳಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News