ಉಪಚುನಾವಣೆ ಮತದಾನ ಶಾಂತಿಯುತ: ಡಿ.9ರ ಫಲಿತಾಂಶದತ್ತ ಎಲ್ಲರ ಚಿತ್ತ

Update: 2019-12-05 15:03 GMT

ಬೆಂಗಳೂರು, ಡಿ.5: ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹಾಗೂ ಅನರ್ಹರ ಭವಿಷ್ಯ ತೀರ್ಮಾನಿಸಲಿರುವ ಉಪಚುನಾವಣೆ ಮತದಾನ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಅಂತ್ಯಕಂಡಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಡಿ.9ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಗುರುವಾರ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ರಾಜ್ಯದ ಹದಿನೈದು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದಲೇ ಹಕ್ಕು ಚಲಾಯಿಸಿದ್ದಾರೆ. ಅತ್ಯಂತ ಹೆಚ್ಚು ಹೊಸಕೋಟೆ-ಶೇ.86.77, ಅತ್ಯಂತ ಕಡಿಮೆ ಕೆ.ಆರ್.ಪುರಂ ಶೇ.43.25ರಷ್ಟು, ಒಟ್ಟಾರೆ ಶೇ.66.25ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇವಿಎಂನಲ್ಲಿನ ತಾಂತ್ರಿಕ ದೋಷದಿಂದ ಕೆಲವೆಡೆ ಮತದಾನ ವಿಳಂಬ, ಹೆಸರು ನಾಪತ್ತೆ ಗೊಂದಲ, ಹಣ ಹಂಚಿಕೆ ಆರೋಪ-ಪ್ರತ್ಯಾರೋಪ, ರಾಜಕೀಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ಸಣ್ಣ-ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿದರೆ 15 ಕ್ಷೇತ್ರಗಳಲ್ಲಿ ಅಹಿತಕರ ಘಟನೆಗಳ ಬಗ್ಗೆ ವರದಿಯಾಗಿಲ್ಲ.

ಮೂಲಸೌಕರ್ಯಕ್ಕೆ ಆಗ್ರಹಿಸಿ ಬಳ್ಳಾರಿಯ ವಿಜಯನಗರ ಕ್ಷೇತ್ರದ ಮುದ್ಲಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಚುನಾವಣಾಧಿಕಾರಿಗಳ ಮನವೊಲಿಕೆ ಬಳಿಕ ಗ್ರಾಮಸ್ಥರು ಮತಚಲಾಯಿಸಿದ್ದಾರೆ. ಕ್ರಿಮಿನಲ್ ಪ್ರಕರಣವಿದ್ದ ಪಕ್ಷದ ಬೂತ್ ಏಜೆಂಟ್‌ವೊಬ್ಬರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೊರಗೆ ಕಳುಹಿಸಿದ್ದು, ಗೊಂದಲಕ್ಕೆ ಕಾರಣವಾಗಿತ್ತು. ಅಧಿಕಾರಿಗಳ ಮಧ್ಯಪ್ರವೇಶದಿಂದ ಗೊಂದಲ ನಿವಾರಣೆಯಾಗಿದೆ.

ಬಿಜೆಪಿ ಸರಕಾರಕ್ಕೆ ಅಗ್ನಿ ಪರೀಕ್ಷೆ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತೀವ್ರ ಪ್ರತಿಷ್ಠೆಯಾಗಿದ್ದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಕುಮಾರಸ್ವಾಮಿ ಸೇರಿ ಘಟಾನುಘಟಿ ನಾಯಕರು ಹದಿನೈದು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು.

ಅನರ್ಹರ ಭವಿಷ್ಯಕ್ಕೆ ಮುದ್ರೆ: ಕಾಂಗ್ರೆಸ್ ಪಕ್ಷದ 13, ಜೆಡಿಎಸ್ ಮೂವರು ಹಾಗೂ ಕಾಂಗ್ರೆಸ್‌ನ ಸಹ ಸದಸ್ಯ ಆರ್.ಶಂಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರಕಾರವನ್ನು ಪತನಗೊಳಿಸಿದ್ದರು. ಆ ಪೈಕಿ ರಾಜರಾಜೇಶ್ವರಿನಗರ, ರಾಯಚೂರಿನ ಮಸ್ಕಿ ಕ್ಷೇತ್ರವನ್ನು ಹೊರತುಪಡಿಸಿ ಹದಿನೈದು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು.

ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಂ, ಯಶವಂತಪುರ, ಬೆಳಗಾವಿ ಜಿಲ್ಲೆಯ ಗೋಕಾಕ್, ಕಾಗವಾಡ, ಅಥಣಿ, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಹೊಸಪೇಟೆ ಹಾಗೂ ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ‘ಅನರ್ಹರು’ ಸೇರಿ 165 ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮತದಾರ ಮುದ್ರೆ ಒತ್ತಿದ್ದಾನೆ.

ಹಕ್ಕು ಚಲಾಯಿಸಿದ ಅಭ್ಯರ್ಥಿ-ಗಣ್ಯರು: ಕೆ.ಆರ್.ಪೇಟೆಯಲ್ಲಿ ಶತಾಯುಷಿ ಸಣ್ಣಮ್ಮ, ಅಥಣಿ ಕ್ಷೇತ್ರದ ನಾಗನೂರಿನಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಚಿಕ್ಕಬಳ್ಳಾಪುರದ ಪೆರೇಸಂದ್ರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಮಹಾಲಕ್ಷ್ಮಿ ಲೇಔಟ್‌ನ ಕಮಲಾನಗರದ ಶಾಲೆಯಲ್ಲಿ ಕೆ.ಗೋಪಾಲಯ್ಯ, ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ, ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಸೇರಿ 3ಪಕ್ಷಗಳ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಹಕ್ಕು ಚಲಾಯಿಸಿದ್ದಾರೆ.

ಅಧಿಕಾರಿ ಪರಾರಿ: ಗೋಕಾಕ್ ಕ್ಷೇತ್ರದ ಮತಗಟ್ಟೆಯೊಂದಕ್ಕೆ ನಿಯೋಜಿಸಲಾಗಿದ್ದ ಚುನಾವಣಾಧಿಕಾರಿ ಪ್ರಕಾಶ್ ವೀರಭದ್ರಪ್ಪ ನಾಶಿಪುಡಿ ಮದ್ಯಪಾನ ಸೇವಿಸಿ ಬಂದಿದ್ದನ್ನು ಮತದಾರರು ಪ್ರಶ್ನಿಸಿದ್ದು, ಆ ಬಳಿಕ ಮತಗಟ್ಟೆಯಿಂದ ಪರಾರಿಯಾಗಿದ್ದಾರೆ. ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.

ಲೆಕ್ಕಾಚಾರ: ಉಪಚುನಾವಣೆ ಫಲಿತಾಂಶ ಬಿಜೆಪಿ ಸರಕಾರದ ಅಳಿವು-ಉಳಿವು ನಿರ್ಧರಿಸಲಿರುವ ಕಾರಣಕ್ಕೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್-ಜೆಡಿಎಸ್ ಎಷ್ಟು ಸ್ಥಾನಗಳನ್ನು ಗೆಲ್ಲಿದ್ದಾರೆಂಬ ಲೆಕ್ಕಾಚಾರ ಆರಂಭವಾಗಿದೆ.

ಡಿ.9ರ ಬೆಳಗ್ಗೆ ಹದಿನೈದು ಕ್ಷೇತ್ರಗಳ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ 12ಗಂಟೆ ವೇಳೆಗೆ ಉಪಚುನಾವಣೆ ಫಲಿತಾಂಶ ಗೊತ್ತಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಫಲಿತಾಂಶದ ನೆಟ್ಟಿದೆ. ಮತದಾನಕ್ಕೆ 15 ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಶೇಕಡವಾರು ಮತದಾನ:

ಅಥಣಿ-ಶೇ.75.23

ಕಾಗವಾಡ-ಶೇ.76.27

ಗೋಕಾಕ್-ಶೇ.73.08

ಯಲ್ಲಾಪುರ-ಶೇ.77.52

ಹಿರೇಕೆರೂರು-ಶೇ.78.63

ರಾಣೆಬೆನ್ನೂರು-ಶೇ.73.53

ವಿಜಯನಗರ-ಶೇ.64.94

ಚಿಕ್ಕಬಳ್ಳಾಪುರ-ಶೇ.86.19

ಕೆ.ಆರ್.ಪುರಂ-ಶೇ.43.25

ಮಹಾಲಕ್ಷ್ಮಿ ಲೇಔಟ್-ಶೇ.50.92

ಯಶವಂತಪುರ-ಶೇ.54

ಶಿವಾಜಿನಗರ-ಶೇ.44.60

ಹೊಸಕೋಟೆ-ಶೇ.86.77

ಕೆ.ಆರ್.ಪೇಟೆ-ಶೇ.80

ಹುಣಸೂರು-ಶೇ.80.62

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News