ಮತದಾರರನ್ನು ಆಕರ್ಷಿಸಿದ ‘ಸಖಿ’ ಮತಗಟ್ಟೆಗಳು

Update: 2019-12-05 16:11 GMT

ಬೆಂಗಳೂರು, ಡಿ.5: ಉಪ ಚುನಾವಣೆಯಲ್ಲಿ ಹದಿನೈದು ಕ್ಷೇತ್ರಗಳಲ್ಲಿಯೂ ಮಹಿಳಾ ಮತದಾರರನ್ನು ಮತಗಟ್ಟೆಗಳ ಕಡೆಗೆ ಆಕರ್ಷಿಸುವ ಸಲುವಾಗಿ ವಿಶೇಷವಾಗಿ ರೂಪಿಸಿದ್ದ ‘ಸಖಿ’ ಮತಗಟ್ಟೆಗಳು ಮಹಿಳಾ ಮತದಾರರನ್ನು ಸೆಳೆಯುವಂತಿದ್ದವು.

ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗ ವಿಶೇಷ ಪರಿಕಲ್ಪನೆ ಅಡಿಯಲ್ಲಿ ಈ ಸಖಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೂ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.

ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಹೊಸಕೋಟೆ, ಶಿವಾಜಿನಗರ ಸೇರಿದಂತೆ 15 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸುಮಾರು 40 ರಷ್ಟು ಸಖಿ ಮತಗಟ್ಟೆಗಳಿದ್ದವು.

ಸಖಿ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿದ್ದು, ಎಲ್ಲರೂ ಗುಲಾಬಿ ಬಣ್ಣದ ಧಿರಿಸು ಧರಿಸಿದ್ದರಿಂದ ಆಕರ್ಷಣೀಯವಾಗಿ ಕಂಡುಬರುತ್ತಿದ್ದರು. ಈ ಮತಗಟ್ಟೆಗಳಲ್ಲಿ ಎಲ್ಲರಿಗೂ ಮತದಾನಕ್ಕೆ ಅವಕಾಶ ಇದ್ದಿದ್ದರಿಂದ ಪುರುಷರು ಹಾಗೂ ಮಹಿಳೆಯರೂ ಅಧಿಕ ಸಂಖ್ಯೆಯಲ್ಲಿ ಮತಗಟ್ಟೆಗಳ ಕಡೆಗೆ ಆಗಮಿಸಿ ಮತ ಚಲಾಯಿಸಿದರು.

ಮಹಿಳಾ ಸಶಕ್ತೀಕರಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ಸ್ಥಾಪಿಸಿದ್ದ ಸಖಿ ಮತಗಟ್ಟೆಗಳ ದ್ವಾರಗಳನ್ನು ಬಲೂನ್‌ಗಳ ಮೂಲಕ ಸಿಂಗರಿಸಲಾಗಿತ್ತು. ಒಳಭಾಗದಲ್ಲಿಯೂ ಬಣ್ಣಗಳಿಂದ ಸಿಂಗಾರ ಮಾಡಿದ್ದು, ಆಕರ್ಷಣೀಯವಾಗಿ ಕಾಣುತ್ತಿದ್ದವು. ಸಖಿ ಮತಗಟ್ಟೆಗಳಲ್ಲಿ ಎಲ್ಲ ವಯಸ್ಸಿನವರೂ ಸಂತಸದಿಂದ ಮತದಾನ ಮಾಡಿ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.

ಚುನಾವಣಾ ಆಯೋಗದ ನಿರ್ದೇಶನದಂತೆ ಸಖಿ ಮತಗಟ್ಟೆಯನ್ನು ಆಕರ್ಷಣೀಯವಾಗಿ ರೂಪಿಸಲಾಗಿದೆ. ಇಲ್ಲಿಗೆ ಬಂದು ಮತ ಚಲಾಯಿಸುವವರು ಸಂತಸದಿಂದ ಹಿಂದಿರುಗಿ ಹೋಗುತ್ತಿದ್ದಾರೆ. ಇದೇ ರೀತಿ ಎಲ್ಲ ಕಡೆಗಳಲ್ಲಿಯೂ ಸಿಂಗರಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾವಣೆಗೆ ಬರಬಹುದು ಎಂದು ಇಲ್ಲಿನ ಸಖಿ ಮತಗಟ್ಟೆ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ವಿಶೇಷಚೇತನರು ನಿರ್ವಹಿಸಿದ ಮತಗಟ್ಟೆಗಳು: ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ 13 ಮತಗಟ್ಟೆಗಳನ್ನು ವಿಶೇಷಚೇತನರು ನಿರ್ವಹಿಸಿದರು. ಮತಗಟ್ಟೆ ಅಧಿಕಾರಿ ಸೇರಿದಂತೆ ಎಲ್ಲರೂ ವಿಶೇಷಚೇತನರಿದ್ದರು. ಅಂಗವೈಕಲ್ಯವುಳ್ಳವರು ಏನೂ ಮಾಡಲಾಗದು ಎಂಬ ಆರೋಪವನ್ನು ದೂರವಿಟ್ಟು, ನಮ್ಮಿಂದಲೂ ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News