ಮೈಸೂರು: ಶಾಸಕ ಅನಿಲ್ ಚಿಕ್ಕಮಾದು- ಪೊಲೀಸರ ನಡುವೆ ಮಾತಿನ ಚಕಮಕಿ; ಗ್ರಾಮಸ್ಥರಿಂದ ಪ್ರತಿಭಟನೆ

Update: 2019-12-05 18:00 GMT

ಮೈಸೂರು,ಡಿ.5: ಹುಣಸೂರು ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಮತದಾನ ಮಾಡಲು ಬಂದ ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಹುಟ್ಟೂರು ಹೊಸರಾಮೇನಹಳ್ಳಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮತ ಚಲಾಯಿಸಿ ಮತಗಟ್ಟೆಯಿಂದ ಹೊರಬಂದು ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದ ವೇಳೆ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಬಂದಿದ್ದು, ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ. ಈ ಸಮಯದಲ್ಲಿ ಗ್ರಾಮಸ್ಥರು ಪೊಲೀಸರ ನಡೆಯನ್ನ ಖಂಡಿಸಿ ಗ್ರಾಮದ ಬೆಟ್ಟದ ಚಿಕ್ಕಮ್ಮ ದೇವಾಲಯದ ಮುಂದೆ ಪ್ರತಿಭಟನೆ ನಡೆಸಿ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಶಾಸಕ ಅನಿಲ್ ಚಿಕ್ಕಮಾದು, ಅನಿಲ್ ತಾಯಿ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಸ್ಥಳಕ್ಕೆ ಬಂದ ಎಎಸ್ಪಿ ಸ್ನೇಹ ಅವರು ಗ್ರಾಮಸ್ಥರೊಡನೆ ಸಂಧಾನಕ್ಕೆ ಮುಂದಾಗಿದ್ದು, ಗ್ರಾಮಸ್ಥರು ಸಂಧಾನಕ್ಕೆ ಬಗ್ಗದೆ ಪ್ರತಿಭಟನೆ ಮುಂದುವರೆಸಿ ಇನ್ಸ್ ಪೆಕ್ಟರ್ ಕ್ಷಮೆ ಕೇಳುವಂತೆ ಪಟ್ಟ ಹಿಡಿದರು.

ಈ ಹೈಡ್ರಾಮಗಳ ನಡುವೆ ಗ್ರಾಮದಲ್ಲಿ ನಡೆದ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕರೆ ಮಾಡಿ ಗಮನಕ್ಕೆ ತಂದರು. ಈ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಎಎಸ್ಪಿ ಸ್ನೇಹ ಜೊತೆ ಮಾತನಾಡಿದ್ದು, ಸ್ನೇಹ ಅವರು ಸಿದ್ದರಾಮಯ್ಯಗೆ ವಾಸ್ತವ ಪರಿಸ್ಥಿತಿ ತಿಳಿಸಿದರು. ಬಳಿಕ ಶಾಸಕರು ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಎಸ್ ಪಿ ಸ್ನೇಹ ಅವರು ಸಿದ್ಧರಾಮಯ್ಯಗೆ ಭರವಸೆ ನೀಡಿದರು.

ಇದಾದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ವಿಜಯಕುಮಾರ್ ಜೊತೆ ಮಾತನಾಡಿ ಕೆಲ ಸೂಚನೆ ನೀಡಿದ್ದಾರೆ. ಬಳಿಕ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಇತರರು ಘಟನಾ ಸ್ಥಳದಿಂದ ನಿರ್ಗಮಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಎಫ್‍ಐಆರ್: ಹೊಸರಾಮೇನಹಳ್ಳಿಯಲ್ಲಿ ಶಾಸಕರ ಜೊತೆ ಪೊಲೀಸರು ಕಟುವಾಗಿ ನಡೆದುಕೊಂಡರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ ಕುಮಾರ್ ಪೊಲೀಸರೊಂದಿಗೆ ಏಕವಚನದಲ್ಲಿ ಮಾತನಾಡಿದರು ಎನ್ನಲಾಗಿದೆ.

ಪೊಲೀಸರು ಸಮಜಾಯಿಷಿ ಕೊಡಲು ಎಷ್ಟೇ ಪ್ರಯತ್ನ ಪಟ್ಟರೂ ಆಡಳಿತ ಪಕ್ಷದವರಿಗೆ ಒಂದು ರೀತಿ ನಮಗೆ ಒಂದು ರೀತಿ ಮಾಡುತಿದ್ದೀರಿ ಎಂದು ಪೊಲೀಸರ ಜೊತೆ ಜೋರಾಗಿ ಮಾತಿನ ಚಕಮಕಿ ನಡೆಸಿದರು. ಬಳಿಕ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ವಿಜಯ್‍ ಕುಮಾರ್ ಅವರ ಮೇಲೆ ಪೊಲೀಸರು ಸೆಕ್ಷನ್ 353ರ ಅಡಿಯಲ್ಲಿ ಎಫ್.ಐ.ಆರ್.ದಾಖಲಿಸಿದ್ದಾರೆ.

ಮತ್ತೊಂದೆಡೆ ಶಾಸಕ ಅನಿಲ್ ಚಿಕ್ಕಮಾದು 144 ಸೆಕ್ಷನ್ ಜಾರಿಯಲ್ಲಿದ್ದರೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News