ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ: ಶೇ.80ರಷ್ಟು ಮತ ಚಲಾವಣೆ

Update: 2019-12-05 18:06 GMT

ಮಂಡ್ಯ, ಡಿ.5: ಕೆಲವೆಡೆ ಮತಯಂತ್ರ ದೋಷ ಕಂಡುಬಂದದ್ದನ್ನು ಹೊರತುಪಡಿಸಿ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆ ಶಾಂತಿಯುತವಾಗಿತ್ತು.

ಚುನಾವಣೆ ಶಾಂತಿಯುತ, ಪಾರದರ್ಶಕವಾಗಿ ನಡೆಯಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕೈಗೊಂಡಿತ್ತು. ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಾವೇ ಖುದ್ದಾಗಿ ಹಲವು ಮತಗಟ್ಟೆಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರೂ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಯಿತು. ಮತದಾರರು ಖುಷಿಯಿಂದಲೇ ಮತದಾನ ಕೇಂದ್ರಗಳಿಗೆ ತಮ್ಮ ಹಕ್ಕು ಚಲಾವಣೆಗೆ ತೆರಳುತ್ತಿರುವುದು ಕಂಡುಬಂದಿತು. ಬೆಳಗ್ಗೆ 9 ಗಂಟೆ ವೇಳೆಗೆ ಶೇ.20ರಷ್ಟು, ಮಧ್ಯಾಹ್ನ 1ರವರೆಗೆ ಶೇ.39ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನ ಮೀರುತ್ತಿದ್ದಂತೆ ಮತದಾನ ಮತ್ತಷ್ಟು ಚುರುಕುಗೊಂಡಿತು. ಕೆಲವು ಮತಗಟ್ಟೆಗಳ ಬಳಿ ಮತ ಚಲಾಯಿಸಲು ಮತದಾರರು ಸಾಲುಗಟ್ಟಿ ನಿಂತರು. ಮಧ್ಯಾಹ್ನ 3ಕ್ಕೆ ಶೇ.59 ಹಾಗೂ ಸಂಜೆ 5 ಗಂಟೆ ವೇಳೆಗೆ ಶೇ.75.87ರಷ್ಟು ಮತಗಳು ಚಲಾವಣೆ ಆದವು.

ಶತಾಯುಷಿಗಳು, ವಿಕಲಚೇತನರೂ ಹುರುಪಿನಿಂದ ಮತಗಟ್ಟೆಗೆ ಬಂದು ಬಂಧುಗಳ ಹಾಗೂ ಸಿಬ್ಬಂದಿಯ ಸಹಾಯ ಪಡೆದು ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಮದುವೆಯಾಗುತ್ತಿದ್ದ ಯುವಕ ವರನ ವೇಷದಲ್ಲೇ ಆಗಮಿಸಿ ತನ್ನ ಹಕ್ಕು ಚಲಾಯಿಸಿ ಗಮನ ಸೆಳೆದಿದ್ದಾನೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ತಮ್ಮ ಕುಟುಂಬದ ಜತೆ ಕೆ.ಆರ್.ಪೇಟೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ತನ್ನ ಕುಟುಂಬದ ಜತೆ ಬಂಡಿಹೊಳೆ ಗ್ರಾಮದ ಮತಗಟ್ಟೆಯಲ್ಲಿ ಮತ ಹಾಕಿದರು.

ಮುಕ್ಕಾಲು ಗಂಟೆ ಕಾದು ಕುಳಿತ ಅಭ್ಯರ್ಥಿ: ಆರಂಭದಲ್ಲೇ ಮತಯಂತ್ರ ಕೈಕೊಟ್ಟಿದ್ದರಿಂದ ಕೆ.ಆರ್.ಪೇಟೆ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮತ ಚಲಾಯಿಸಲು ಕುಟುಂಬದವರ ಜತೆ ಮತಗಟ್ಟೆ ಬಳಿ ಸುಮಾರು ಮುಕ್ಕಾಲು ಗಂಟೆ ಕಾಯಬೇಕಾಯಿತು.

ತನ್ನ ಹುಟ್ಟೂರು ಬಂಡಿಹೊಳೆ ಗ್ರಾಮದ ಮತಗಟ್ಟೆಗೆ ಪತ್ನಿ ಜತೆ ಮತಚಲಾಯಿಸಲು ದೇವರಾಜು ಬೆಳಗ್ಗೆಯೇ ಆಗಮಿಸಿದರು. ಆದರೆ, ಮತಯಂತ್ರ ಕೈಕೊಟ್ಟಿತು. ಸುಮಾರು 40 ನಿಮಿಷ ಕುಳಿತಿದ್ದು, ದೋಷ ಸರಿಪಡಿಸಿದ ನಂತರ ಮತದಾನ ಮಾಡಿದರು.

ಕಸಬಾ ಹೋಬಳಿಯ ಹೆಗ್ಗಡಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತಯಂತ್ರ ತಾಂತ್ರಿಕ ದೋಷದಿಂದ ಸುಮಾರು 20 ನಿಮಿಷ ಮತದಾನ ಸ್ಥಗಿತವಾಗಿತ್ತು. ಚುನಾವಣಾಧಿಕಾರಿ ಜತೆ ಆಗಮಿಸಿದ ತಂತ್ರಜ್ಞರು ಮತಯಂತ್ರವನ್ನು ಸರಿಪಡಿಸಿದರು. ಗುರುತಿನ ಪತ್ರ ಇಲ್ಲದೆ ಮತದಾನಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪತ್ನಿಗೆ ಮತದಾನಕ್ಕೆ ಅವಕಾಶ ದೊರೆಯಲಿಲ್ಲ. ಕೊನೆಗೆ ಗುರುತಿನ ಚೀಟಿ ತಂದು ಹಕ್ಕನ್ನು ಚಲಾಯಿಸಿದರು.

ಕುಸಿದು ಬಿದ್ದ ಮಹಿಳೆ:
ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ ಮಹಿಳೆಯೊಬ್ಬರು ತಲೆಸುತ್ತು ಬಂದು ಕುಸಿದು ಬಿದ್ದ ಘಟನೆ ಸಂಭವಿಸಿದೆ. ಬಂಡಿಹೊಳೆ ಮತಗಟ್ಟೆ ಬಳಿ ಇದು ಸಂಭವಿಸಿದ್ದು, ಸಿಬ್ಬಂದಿ ಆಕೆಗೆ ನೀರು ಕುಡಿಸಿ ಉಪಚರಿಸಿದರು. ನಂತರ, ಆಕೆ ಮತದಾನ ಮಾಡಿದರು.

ವಿವಿ ಪ್ಯಾಟ್ ಪ್ರತಿ ವೈರಲ್
ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಮತ ಹಾಕಿದ ವಿವಿ ಪ್ಯಾಟ್ ಮುದ್ರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿವಿ ಪ್ಯಾಟ್ ಪ್ರತಿ ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದ ಅನಿಲ್‍ಗೌಡ ಎಂಬ ಯುವಕನದ್ದು ಎಂದು ತಿಳಿದು ಬಂದಿದೆ.

ಕೆ.ಆರ್.ಪೇಟೆ: ಶೇ.80ರಷ್ಟು ಮತದಾನ
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಶೇ.80ರಷ್ಟು ದಾಖಲೆ ಮತದಾನವಾಗಿದೆ. ಒಟ್ಟು 1,66,612 ಮಂದಿ ಮತ ಚಲಾಯಿಸಿದ್ದು, ಈ ಪೈಕಿ 82,904 ಮಹಿಳೆಯರು, 83,706 ಪುರುಷರು ಮತಚಲಾಯಿಸಿದ್ದಾರೆ. 2 ಇತರೆ ಮತ ಚಲಾವಣೆ ಆಗಿದೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,08,254.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News