ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲು.... : 'ಕೈ' ಹಿರಿಯ ನಾಯಕನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು ?

Update: 2019-12-06 13:54 GMT

ರಾಯಚೂರು, ಡಿ. 6: ರಾಜ್ಯದ 15 ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಲಿವೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಸಿಂಧನೂರು ನಗರದ ಯುವ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 15 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ನಿಶ್ಚಿತವಾಗಿ ಗೆಲ್ಲಲಿದೆ. ಫಲಿತಾಂಶಕ್ಕೂ ಮೊದಲೇ ಮೈತ್ರಿ ಸರಕಾರ ರಚನೆ ಕುರಿತು ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಡಿ.9ರ ಫಲಿತಾಂಶದ ಬಳಿಕ ಮರು ಮೈತ್ರಿ ಬಗ್ಗೆ ಚರ್ಚೆ ನಡೆಸಲಾಗುವುದು. ಜೆಡಿಎಸ್ ವರಿಷ್ಠ ದೇವೇಗೌಡ ಮೈತ್ರಿ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಮತ್ತೊಮ್ಮೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಚರ್ಚಿಸುವೆ ಎಂದಿದ್ದಾರೆ. ಹೀಗಾಗಿ ಎಲ್ಲವೂ ಫಲಿತಾಂಶದ ಬಳಿಕ ಅಂತಿಮಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಲು ಯಾರ ವಿರೋಧವೂ ಇಲ್ಲ. ಆದರೆ, ಫಲಿತಾಂಶಕ್ಕೂ ಮೊದಲೇ ಮೈತ್ರಿ, ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡುವುದು ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತೆ ಆಗುತ್ತದೆ’ ಎಂದು ಪ್ರತಿಕ್ರಿಯೆ ನೀಡಿದರು.

ಉದ್ದೇಶ ಪೂರ್ವಕ ಆಗಬಾರದು: ತೆಲಂಗಾಣ ಪೊಲೀಸರು ಅತ್ಯಾಚಾರ ಆರೋಪಿಗಳ ಮೇಲೆ ನಡೆಸಿದ ಎನ್‌ಕೌಂಟರ್ ಆತ್ಮರಕ್ಷಣೆಗಾಗಿ ನಡೆಸಿದ್ದರೆ ಸರಿ. ಆದರೆ, ಅದು ಯಾವುದೇ ಕಾರಣಕ್ಕೂ ಉದ್ದೇಶಪೂರ್ವಕವಾಗಿ ಆಗಿರಬಾರದು’ ಎಂದು ಸಿದ್ದರಾಮಯ್ಯ ಹೇಳಿದರು.

ನಾನೊಬ್ಬ ವಕೀಲನಾಗಿ ಹೇಳುತ್ತಿದ್ದೇನೆ. ಇಂತಹ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು. ನಮ್ಮ ದೇಶದಲ್ಲಿ ಮರಣದಂಡನೆ ಶಿಕ್ಷೆಯಿಲ್ಲ, ಹೀಗಾಗಿ ಅದನ್ನು ಜಾರಿಗೆ ತರಬೇಕು ಎಂದು ಸಿದ್ದರಾಮಯ್ಯ ಇದೇ ವೇಳೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News