ಹಲವು ಅಪರಾಧ ಪ್ರಕರಣಗಳನ್ನು ಬೇಧಿಸಿದ್ದ ‘ರೂಬಿ’ ಇನ್ನಿಲ್ಲ

Update: 2019-12-06 14:14 GMT

ರಾಯಚೂರು, ಡಿ.6: ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿದ್ದ ಪೊಲೀಸ್ ಶ್ವಾನ ರೂಬಿ ಶುಕ್ರವಾರ ಸಾವನ್ನಪ್ಪಿದೆ.

2016ರ ಜುಲೈ 3 ರಂದು ಶ್ವಾನದಳ ವಿಭಾಗಕ್ಕೆ ತನಿಖೆಗಾಗಿ ನಿಯುಕ್ತಿಗೊಂಡಿದ್ದ ರೂಬಿಗೆ, ಬೆಂಗಳೂರಿನ ಆಡುಗೋಡಿಯಲ್ಲಿ 7 ತಿಂಗಳು ತರಬೇತಿ ನೀಡಲಾಗಿತ್ತು. ಒಟ್ಟಾರೆ ಇಲಾಖೆಯಲ್ಲಿ 13 ವರ್ಷ ಆರು ತಿಂಗಳು ಕಾರ್ಯ ನಿರ್ವಹಿಸಿರುವ ರೂಬಿ ಸಾಧನೆಯನ್ನು ನೆನೆದು ಪೊಲೀಸರು ಕಂಬನಿ ಮಿಡಿದರು.

ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ್ದ ಕಿಡಿಗೇಡಿಗಳನ್ನು ರೂಬಿ ಪತ್ತೆ ಮಾಡಿತ್ತು. ಅಷ್ಟೇ ಅಲ್ಲದೆ, ಇಂಜಿನಿಯರ್ ಒಬ್ಬರ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಶಂಸೆಗೆ ಪಾತ್ರವಾಗಿತ್ತು.

ಇಲ್ಲಿಯವರೆಗೂ ಬರೋಬ್ಬರಿ 246 ಅಪರಾಧ ಪ್ರಕರಣಗಳನ್ನು ತನಿಖೆ ಮಾಡಿದ್ದು, ಅದರಲ್ಲಿ 18 ಪ್ರಕರಣಗಳಲ್ಲಿ ಅಪರಾಧ ಪತ್ತೆ ಹಚ್ಚಿ ಪೊಲೀಸ್ ಇಲಾಖೆಯ ಗೌರವವನ್ನು ರೂಬಿ ಹೆಚ್ಚಿಸಿದೆ. ಶುಕ್ರವಾರ ಸಕಲ ಗೌರವದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News