ಗಾಂಧಿ ಬ್ರಿಟಿಷರ ವಿರುದ್ಧ, ಅಂಬೇಡ್ಕರ್ ಸ್ವದೇಶಿ ಗುಲಾಮಗಿರಿಯ ವಿರುದ್ಧ ಹೋರಾಡಿದರು: ಕೆ.ಎಸ್.ಭಗವಾನ್

Update: 2019-12-06 16:48 GMT

ಮೈಸೂರು,ಡಿ.6: ಗಾಂಧಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಸಮಾನತೆಗಾಗಿ ಸ್ವದೇಶಿ ಗುಲಾಮಗಿರಿಯ ವಿರುದ್ಧವೇ ಹೋರಾಟ ಮಾಡಿದರು ಎಂದು ಪ್ರಗತಿಪರ ಚಿಂತಕ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಪ್ರತಿಪಾದಿಸಿದರು.

ನಗರದ ವಿಶ್ವೇಶ್ವರನಗರದ ಅಶೋಕಪುರಂ ರುದ್ರಭೂಮಿಯಲ್ಲಿ ಶುಕ್ರವಾರ ಅಂಬೇಡ್ಕರ್ ಅವರ 63ನೇ ಪರಿನಿಬ್ಬಾಣ ದಿನದ ಅಂಗವಾಗಿ ಗೌತಮ ಪ್ರಕಾಶ ಹೊರತಂದಿರುವ ಸಾಹಿತಿ ಸಿದ್ದಸ್ವಾಮಿ ವಿರಚಿತ ಮೈಸೂರು ಸಂಸ್ಥಾನದ “ಆದಿ ಕರ್ನಾಟಕ ಪುರ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಇಲ್ಲದಿದ್ದರೆ ನಾವು ಇಲ್ಲಿ ನಿಂತು ಮಾತನಾಡಲು, ಸಿದ್ದಸ್ವಾಮಿ ಪುಸ್ತಕ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಮನುವಾದಿಗಳ ಷಡ್ಯಂತರಕ್ಕೆ ಶೂದ್ರರು ಬಲಿಯಾಗಿ ನಮ್ಮನ್ನು ನಾವೇ ಶೋಷಣೆಗೊಳಪಡಿಸಿಕೊಳ್ಳಬೇಕಾಗಿತ್ತು. ಅಂದು ಮಹಾತ್ಮಗಾಂಧಿ ದೇಶಕ್ಕೆ ಸ್ವಾತಂತ್ರ್ಯಬೇಕು ಎಂದು ಬ್ರಿಟಿಷರ ವಿರುದ್ಧ ಕೋಟ್ಯಂತರ ಜನರನ್ನು ಸಂಘಟಿಸಿ ಹೋರಾಟ ಮಾಡಿದರು. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅಸ್ಪೃಶ್ಯತೆ, ಜಾತಿಯತೆಯನ್ನು ತೊಡೆದು ಹಾಕಲು ಸ್ವದೇಶಿ ಗುಲಾಮಗಿರಿಯ ವಿರುದ್ಧ ಹೋರಾಟ ಮಾಡಿದರು. ಹಾಗೆ ಜಾತಿ, ಮತ, ಧರ್ಮಗಳ ಗುಲಾಮಗಿರಿಯ ವಿರುದ್ಧವೂ ಹೋರಾಟ ಮಾಡಿದರು ಎಂದು ಸ್ಮರಿಸಿದರು.

ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಸತ್ಯವನ್ನು ಹೇಳಿದರೆ ನಮ್ಮನ್ನು ಸುಟ್ಟುಹಾಕುತ್ತೇವೆ ಎಂದು ಹೇಳುತ್ತಾರೆ. ಬಾಬಾಸಾಹೇಬರು ದಲಿತರು, ಹಿಂದುಳಿದವರು ಮತ್ತು ಶೂದ್ರರಿಗೆ ಸತ್ಯಹೇಳುವ ಕೆಲಸವನ್ನು ಮಾಡಿದರು. ಅವರು ಯಾವುದೇ ಬೆದರಿಕೆಗಳಿಗೆ ಬಗ್ಗದೆ ಹೋರಾಟ ಮಾಡಿದರು. ಅವರ ಬುದ್ಧಿ ಶಕ್ತಿ ಮತ್ತು ಅವರ ಅಪಾರ ಜ್ಞಾನದಿಂದಾಗಿ ಅವರನ್ನು ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಭಾರತದಲ್ಲಿ ಸಮಾನತೆ ಬೇಕು ಎಂದು ಅಂಬೇಡ್ಕರ್ ಗಾಂಧಿ ವಿರುದ್ಧವೇ ಹೋರಾಟ ಮಾಡಿದರು. ಅಂದು ಗಾಂಧಿ ವಿರುದ್ಧ ಹೋರಾಟ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ, ಬ್ರಿಟಿಷರ ಆಡಳಿತ ಇಲ್ಲದಿದ್ದರೆ ಅಂಬೇಡ್ಕರ್ ಅವರನ್ನು ಅಂದೇ ಹೊಡೆದು ಹಾಕುತ್ತಿದ್ದರು ಎಂದು ಹೇಳಿದರು.

ಸಾಹಿತಿ ಸಿದ್ದಸ್ವಾಮಿ ಆದಿಕರ್ನಾಟಕಪುರ ಪುಸ್ತಕವನ್ನು ಕನ್ನಡದಲ್ಲಿ ಬಹಳ ಅದ್ಭುತವಾಗಿ ಬರೆದಿದ್ದಾರೆ. ಇದನ್ನು ಎಲ್ಲರೂ ಓದಬೇಕು. ಕನ್ನಡ ಭಾಷೆಯನ್ನು ಹೆಚ್ಚು ಬೆಳಸಬೇಕು, ಹಾಗೆ ಇಂಗ್ಲೀಷ್ ಅನ್ನು ಕಲಿಯಬೇಕು, ಏಕೆಂದರೆ ಅಂಬೇಡ್ಕರ್ ಹೆಚ್ಚು ಪುಸ್ತಕಗಳನ್ನು ಬರೆದಿರುವುದು ಇಂಗ್ಲೀಷ್‍ನಲ್ಲಿಯೇ, ಹಾಗಾಗಿ ಅವರ ಪುಸ್ತಕಗಳನ್ನು ಓದಬೇಕು ಎಂದರೆ ಇಂಗ್ಲೀಷ್ ಕಲಿಯಬೇಕು. ನಾರಾಯಣಗುರು, ಪೆರಿಯಾರ್ ಸೇರಿದಂತೆ ಅನೇಕರು ಹೋರಾಟ ಮಾಡಿದ್ದಾರೆ. ಅವರು ಅವರ ಬಾಷೆಯಲ್ಲಷ್ಟೆ ಪುಸ್ತಕಗಳನ್ನು ಬರೆದರು. ಆದರೆ ಅಂಬೇಡ್ಕರ್ ಇಂಗ್ಲೀಷ್‍ನಲ್ಲಿ ಪುಸ್ತಕ ಬರೆದಿದ್ದರಿಂದ ಅಖಿಲ ಭಾರತದಲ್ಲಿ ಹೆಸರು ಮಾಡಿದರು, ಇತಿಹಾಸವನ್ನು ಇಂದಿಯ ಯುವಕರು ತಿಳಿಬೇಕಿದೆ. ಅಂಬೇಡ್ಕರ್ ಇತಿಹಾಸವನ್ನು ಅರ್ಥ ಮಾಡಿಕೊಳ್ಳದವರು ಇತಿಹಾಸವನ್ನು ಸೃಷ್ಟಿಷಸಲಾರರು ಎಂದು ಹೇಳಿದ್ದಾರೆ. ಹಾಗಾಗಿ ಮೊದಲು ನಾವು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕಿದ ಎಂದು ಹೇಳಿದರು.

ರುದ್ರಭೂಮಿಯಲ್ಲಿ ಸಿದ್ದಸ್ವಾಮಿ ಪುಸ್ತಕ ಬಿಡುಗಡೆಯನ್ನು ಏರ್ಪಡಿಸಿದ್ದಾರೆ. ರುದ್ರಭೂಮಿ ಎಂದರೆ ತಪ್ಪು ಕಲ್ಪನೆಯನ್ನು ಮನುವಾದಿಗಳು ಬಿತ್ತಿದ್ದಾರೆ. ರುದ್ರಭೂಮಿ ಎಂದರೆ ಭದ್ರಭೂಮಿ, ಇಲ್ಲಿ ಜಾಗ ಹೆಚ್ಚು ಪುಣ್ಯ ಸ್ಥಳ. ಇಂತಹ ಜಾಗವನ್ನು ಸಿದ್ದಸ್ವಾಮಿ ಆಯ್ಕೆ ಮಾಡಿಕೊಂಡಿರುವುದು ಸಂತಸವನ್ನು ತಂದಿದೆ ಎಂದು ಹೇಳಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಪ್ರಿಯಾಂಕ ರೆಡ್ಡಿ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಸಾಯಿಸಿದ್ದು ಸ್ವಾಗತಾರ್ಹ, ಆದರೆ ಅದೇ ಒಬ್ಬ ದಲಿತ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿದ ಆರೋಪಿಗಳನ್ನೇಕೆ ಸುಮ್ಮನೆ ಬಿಡಲಾಗಿದೆ ಎಂದು ಪ್ರಶ್ನಿಸಿದರು.

ಪ್ರಿಯಾಂಕ ರಡ್ಡಿ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ದೇಶದ ನಾನಾ ಕಡೆ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಯಿತು. ಆದರೆ ಪ್ರತಿನಿತ್ಯ ಅತ್ಯಾಚಾರ ಅಪಮಾನಕ್ಕೊಳಗಾಗುತ್ತಿರುವ ದಲಿತರ ಪರ ಏಕೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುವುದಿಲ್ಲ. ಬರೀ ದಲಿತರಷ್ಟೇ ಪ್ರತಿಭಟನೆ ಮಾಡಬೇಕ, 21ನೇ ಶತಮಾನದಲ್ಲಿ ನಾವುಗಳಿದ್ದರೂ ಇನ್ನೂ ಜಾತಿಯತೆ ಹೋಗಲಾಡಿಸಲು ಸಾಧ್ಯವಾಗಿಲ್ಲ, ಅಂಬೇಡ್ಕರ್ ನೀಡಿದ ಮೀಸಲಾತಿ, ಮತ್ತು ಸಂವಿಧಾನ ಇನ್ನೂ ಸರಿಯಾಗಿ ಜಾರಿಯಾಗಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಕರ್ನಾಟಕಪುರ ಪುಸ್ತಕವನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆಗೊಳಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಸಾಹಿತಿ ಬನ್ನೂರು ಕೆ.ರಾಜು, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಕೃತಿಯ ಕರ್ತೃ ಸಿದ್ದಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News