ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ನೌಕರರಿಗೆ ವೇತನ ಶ್ರೇಣಿ ವಿಸ್ತರಿಸಲು ಹೈಕೋರ್ಟ್ ನಕಾರ

Update: 2019-12-06 16:52 GMT

ಬೆಂಗಳೂರು, ಡಿ.6: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಂಚಿತ ವೇತನ ಶ್ರೇಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಐದು ಮತ್ತು ಆರನೆ ವೇತನ ಶ್ರೇಣಿಯನ್ನು ವಿಸ್ತರಿಸಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ಸುಮತಿ ಹಾಗೂ 30 ಕ್ಕೂ ಹೆಚ್ಚು ಸಂಚಿತ (ಕನ್ಸಾಲಿಡೇಟೆಡ್) ವೇತನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ತಿರಸ್ಕರಿಸಿದೆ.

ಮನವಿ ತಿರಸ್ಕರಿಸಲು ನ್ಯಾಯಪೀಠ ನೀಡಿರುವ ಕಾರಣಗಳು: ಮನವಿ ತಿರಸ್ಕರಿಸಲು ನ್ಯಾಯಪೀಠವು ಕೆಲ ಕಾರಣಗಳನ್ನು ನೀಡಿದ್ದು, ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಕಾಯ್ದೆ-1997ರ ಮತ್ತು ನಿಯಮಗಳ ಅಡಿಯಲ್ಲಿ ಐದನೆ ಮತ್ತು ಆರನೆ ವೇತನ ಶ್ರೇಣಿಯನ್ನು ಅರ್ಜಿದಾರರಿಗೆ ವಿಸ್ತರಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಇದೇ ಮಾದರಿಯ ಮನವಿ ಹೊಂದಿದ ಎಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯದ ನೌಕರರ ಪ್ರಕರಣದಲ್ಲಿ ವಿಭಾಗೀಯ ನ್ಯಾಯಪೀಠ ಸೂಕ್ತ ಕಾನೂನು ವಿಮರ್ಶೆ ನಡೆಸಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಅದನ್ನು ಅನುಸರಿಸಿ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ.

ವಿಭಾಗೀಯ ನ್ಯಾಯಪೀಠ ತಿದ್ದುಪಡಿ ನಿಯಮಗಳನ್ನು ಗಣನೆಗೆ ತೆಗೆದುಕೊಂಡು ಆದೇಶ ಹೊರಡಿಸಿಲ್ಲ. ವೇತನ ಶ್ರೇಣಿ ವಿಸ್ತರಿಸುವಂತೆ ಸುತ್ತೋಲೆ ಹೊರಡಿಸಲು ಮುಜರಾಯಿ ಇಲಾಖೆ ಆಯುಕ್ತರು ಕಾನೂನು ವ್ಯಾಪ್ತಿ ಹೊಂದಿರುವುದಿಲ್ಲ. ಏನಿದ್ದರೂ ಸರಕಾರವೇ ಧಾರ್ಮಿಕ ದತ್ತಿ ನಿಯಮ 8ರ (ವೇತನ ನಿಗದಿಪಡಿಸಲು ಇರುವ ಅಧಿಕಾರ ವ್ಯಾಪ್ತಿ) ಪ್ರಕಾರ ಅಂತಹ ಸುತ್ತೋಲೆ ಹೊರಡಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News