ಡಿ.8: ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಒಂದೇ ದಿನ ಮೂರು ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ

Update: 2019-12-06 17:34 GMT

ಮಂಗಳೂರು, ಡಿ.6: ರಕ್ತದಾನಿಗಳನ್ನು ಉತ್ತೇಜಿಸುವ ಮತ್ತು ಯುವಜನತೆಗೆ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಹಾಗೂ ರೋಗಿಗಳಿಗೆ ಅಗತ್ಯವಿರುವ ಸೂಕ್ತ ಗುಂಪಿನ ರಕ್ತವನ್ನು ಕ್ಲಪ್ತ ಸಮಯದಲ್ಲಿ ಪೂರೈಸುವ ಸಲುವಾಗಿ ಸ್ಥಾಪಿಸಲಾದ ಬ್ಲಡ್ ಹೆಲ್ಪ್ ಕೇರ್, ಕರ್ನಾಟಕ ಸಂಸ್ಥೆಯು ಮೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮೂರು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, ಡಿಸೆಂಬರ್ 8 ರಂದು ಆದಿತ್ಯವಾರ ಈ ಮೂರು ರಕ್ತದಾನ ಶಿಬಿರಗಳು ನಡೆಯಲಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಅಳೇಕಲದಲ್ಲಿ ಎಂ.ಕೆ ಫ್ಯಾಮಿಲಿ ಗ್ರೂಪ್ ಮತ್ತು ಕೆಎಂಸಿ ರಕ್ತನಿಧಿ ಮಂಗಳೂರು ಸಹಯೋಗದೊಂದಿಗೆ 47ನೇ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಅದೇ ದಿನ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಲ್ ಬದರ್ ವೆಲ್ಫೇರ್ ಅಸೋಸಿಯೇಷನ್ ಮತ್ತು ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ ಮೂಡಿಗೆರೆ ಹಾಗೂ ರೆಡ್ ಕ್ರಾಸ್ ರಕ್ತನಿಧಿ ಕುಂದಾಪುರ ಮತ್ತು ಬೈಂದೂರು ಸಹಯೋಗದೊಂದಿಗೆ ಭಟ್ಕಳದ ಜಾಲಿ ರಸ್ತೆಯ ಬದ್ರಿಯಾ ಕಾಲೋನಿಯಲ್ಲಿ 48ನೇ ಶಿಬಿರವನ್ನು ಆಯೋಜಿಸಲಾಗಿದೆ. ಅಲ್ಲದೇ, ಚಿಕ್ಕಮಗಳೂರು ಜಿಲ್ಲೆಯ ಮಲ್ಹರುಲ್ ಅನ್ವರ್ ಜುಮ್ಮಾ ಮಸೀದಿಯಲ್ಲಿ ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಮತ್ತು ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ ಮೂಡಿಗೆರೆ ಹಾಗೂ ಹಾಸನ ರಕ್ತನಿಧಿಯ ಸಹಯೋಗದೊಂದಿಗೆ 49ನೇ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯು ಕಳೆದ ಒಂದೂವರೆ ವರ್ಷಗಳಿಂದ ಕರ್ನಾಟಕ ಮತ್ತು ಕೇರಳದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದು, ತನ್ನ ಐವತ್ತನೇ ರಕ್ತದಾನ ಶಿಬಿರವನ್ನು ಡಿ.15 ರಂದು ಕುಂದಾಪುರದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News