ಸರಕಾರದ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮಕೈಗೊಳ್ಳಬಾರದು: ಹೈಕೋರ್ಟ್ ಪ್ರಶ್ನೆ

Update: 2019-12-06 17:55 GMT

ಬೆಂಗಳೂರು, ಡಿ.6: ಕೊಪ್ಪಳದ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ಅವಘಡ ಸಂಭವಿಸಿ 5 ವಿದ್ಯಾರ್ಥಿಗಳು ಸಾವಿಗೀಡಾದ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಡಿ ಬರುವ ಹಾಸ್ಟೆಲ್‌ಗಳ ಸ್ಥಿತಿಗತಿಗಳ ಬಗ್ಗೆ ವಿವರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಆರೋಪದಡಿ ಏಕೆ ಕ್ರಮ ಜರಗಿಸಬಾರದೆಂಬ ಬಗ್ಗೆ ಉತ್ತರ ನೀಡಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಈ ಕುರಿತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್‌ನ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ಸದಸ್ಯರಾದ ಪಿ.ಪಿ.ಪಿ ಬಾಬುರಾಜು ಹಾಗೂ ಆರ್. ಜಗನ್ನಾಥ್ ಬರೆದಿದ್ದ ಪತ್ರ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪಿಐಎಲ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ರವಿ ಮಳೀಮಠ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳು ಎಷ್ಟು. ಅವುಗಳಲ್ಲಿ ಎಷ್ಟು ನಿಲಯಗಳು ಖಾಸಗಿ ಕಟ್ಟಡದಲ್ಲಿವೆ ಹಾಗೂ ಸರಕಾರಿ ಕಟ್ಟಡದಲ್ಲಿವೆ ಎಂಬ ವಿವರಣೆ ನೀಡಬೇಕು. ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನೇನಾದರೂ ರೂಪಿಸಿದ್ದರೆ ಅವುಗಳ ಬಗ್ಗೆ ವಿವರವಾದ ವರದಿ ನೀಡಬೇಕೆಂದು ಅ.30ರಂದು ಆದೇಶ ನೀಡಿತ್ತು. ಆದರೆ, ವರದಿ ನೀಡಲು ಇನ್ನಷ್ಟು ಸಮಯಾವಕಾಶ ಬೇಕೆಂದು ರಾಜ್ಯ ಸರಕಾರದ ಪರ ವಕೀಲರು ಮನವಿ ಮಾಡಿದರು.

ಬನ್ನಿಕಟ್ಟೆಯ ಖಾಸಗಿ ಕಟ್ಟಡ ಬಾಡಿಗೆಗೆ ಪಡೆದು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ನಡೆಸಲಾಗುತ್ತಿತ್ತು. ಸ್ವಾತಂತ್ರ ದಿನಾಚರಣೆಯಂದು ಹಾಸ್ಟೆಲ್‌ನಲ್ಲಿ ಧ್ವಜಾರೋಹಣ ನಡೆಸಲಾಗಿತ್ತು. ಆ.18ರಂದು ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಬಸವರಾಜ, ದೇವರಾಜ, ಕುಮಾರ್ ಹಾಗೂ ಗಣೇಶ್ ಧ್ವಜಸ್ತಂಭ ತೆರವು ಮಾಡಲು ಮುಂದಾಗಿದ್ದಾಗ ಪಕ್ಕದಲ್ಲೆ ಹಾದುಹೋಗಿದ್ದ ವಿದ್ಯುತ್ ಕಂಬದ ತಂತಿ ಧ್ವಜ ಕಂಬಕ್ಕೆ ಸ್ಪರ್ಶಿಸುತ್ತಲೇ ವಿದ್ಯುತ್ ಪ್ರವಹಿಸಿ ಐವರೂ ಸಾವಿಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News