ಎನ್‌ಕೌಂಟರ್ ಕೊಲೆಗಳನ್ನು ಸಂಭ್ರಮಿಸುವ ಮೊದಲು...

Update: 2019-12-07 05:46 GMT

ದೇಶವೇ ತಲ್ಲಣಿಸುವಂತೆ ಮಾಡಿದ ಹೈದರಾಬಾದ್‌ನ ದಿಶಾ (ಹೆಸರು ಬದಲಿಸಲಾಗಿದೆ) ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣ ವಿಚಿತ್ರ ತಿರುವೊಂದನ್ನು ಪಡೆದುಕೊಂಡಿದೆ. ಬಂಧಿತ ನಾಲ್ವರು ಆರೋಪಿಗಳ ದೋಷ ಸಾಬೀತಾಗುವ ಮೊದಲೇ ಸಂತ್ರಸ್ತೆ ಮೃತರಾಗಿ ಬಿದ್ದ ಸ್ಥಳದಲ್ಲೇ ಪೊಲೀಸ್ ಎನ್‌ಕೌಂಟರ್‌ಗೆಬಲಿಯಾಗಿದ್ದಾರೆ. ‘ಪೊಲೀಸರ ಪಿಸ್ತೂಲನ್ನು ಎಳೆದು ಪರಾರಿಯಾಗಲು ಯತ್ನಿಸಿದಾಗ ಅವರ ಮೇಲೆ ಗುಂಡು ಹಾರಿಸಲಾಗಿದ್ದು ನಾಲ್ವರೂ ಮೃತರಾಗಿದ್ದಾರೆ’ ಎಂದು ಎನ್‌ಕೌಂಟರ್‌ನ ನೇತೃತ್ವ ವಹಿಸಿದ್ದ ಆಯುಕ್ತ ವಿಶ್ವನಾಥ್ ಸಜ್ಜನರ್ ಸ್ಪಷ್ಟ ಪಡಿಸಿದ್ದಾರೆ. ದೇಶದ ದೊಡ್ಡ ಸಂಖ್ಯೆಯ ಜನರು ಈ ಎನ್‌ಕೌಂಟರ್‌ನ್ನು ಸಂಭ್ರಮಿಸಿದ್ದಾರೆ. ರಾಕ್ಷಸೀಯ ಕೃತ್ಯವೆಸಗಿದ್ದ ಆರೋಪಿಗಳಿಗೆ ಈ ಮೂಲಕ ಶಿಕ್ಷೆಯಾಗಿದೆ ಎಂದೂ ಅವರು ಭಾವಿಸಿದ್ದಾರೆ. ಆದರೆ ಅವರನ್ನು ಪೊಲೀಸರು ಕೊಂದು ಹಾಕಿದ್ದು, ‘ಅತ್ಯಾಚಾರ ಎಸಗಿದ ಕಾರಣಕ್ಕಾಗಿ ಅಲ್ಲ’ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ‘ಪರಾರಿಯಾಗುವ ಪ್ರಯತ್ನದಲ್ಲಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಕಾರಣಕ್ಕಾಗಿ’ ಅವರನ್ನು ಕೊಲ್ಲಲಾಯಿತು.

‘ಯಾವ ಕಾರಣಕ್ಕಾಗಿಯಾದರೂ ಸರಿ, ಆರೋಪಿಗಳು ಸತ್ತರಲ್ಲ’ ಎನ್ನುವುದು ಒಂದು ಬರ್ಬರ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗುವ ಕುರಿತ ಒತ್ತಾಸೆಯಿಂದ ನಾವು ಪಲಾಯನಗೈದಂತಾಗುತ್ತದೆ. ಇದೇ ಸಂದರ್ಭದಲ್ಲಿ, ಆರೋಪಿಗಳ ಎನ್‌ಕೌಂಟರ್ ಸಾವನ್ನು ಸಂಭ್ರಮಿಸುತ್ತಿರುವ ಎಲ್ಲರೂ ಒಳಗಿಂದೊಳಗೆ ‘ಇದೊಂದು ನಕಲಿ ಎನ್‌ಕೌಂಟರ್’ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಆ ಮೂಲಕ ನಕಲಿ ಎನ್‌ಕೌಂಟರನ್ನು ಸಮರ್ಥಿಸುತ್ತಲೂ ಇದ್ದಾರೆ. ಇತ್ತ, ಪೊಲೀಸರು ಹೇಳುವಂತೆ ಇದು ತಮ್ಮ ‘ಜೀವರಕ್ಷಣೆ’ಗಾಗಿ ಅನಿವಾರ್ಯವಾಗಿ ಮಾಡಿದ ಎನ್‌ಕೌಂಟರ್ ಆಗಿದ್ದರೆ ಖಂಡಿತವಾಗಿಯೂ ಅದನ್ನು ಬೆಂಬಲಿಸಬೇಕು. ಪೊಲೀಸ್ ಅಧಿಕಾರಿಗಳ ಜೀವಕ್ಕೆ ಅಪಾಯಬಂದಾಗ ಅವರು ಕೋವಿಯೆತ್ತುವುದು ಅನಿವಾರ್ಯ. ಉಳಿದಂತೆ ಪೊಲೀಸರು ತಮ್ಮ ವ್ಯಾಪ್ತಿಯನ್ನು ಮೀರಿ ನಡೆಸುವ ಯಾವುದೇ ಹತ್ಯೆ ‘ಕಗ್ಗೊಲೆ’ಯೇ ಆಗಿದೆ. ಆದುದರಿಂದ, ಹೈದರಾಬಾದ್‌ನಲ್ಲಿ ನಡೆದಿರುವುದು ‘ಎನ್‌ಕೌಂಟರ್ ಸಾವೋ’ ಅಥವಾ ‘ನಕಲಿ ಎನ್‌ಕೌಂಟರ್ ಸಾವೋ’ ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಯಾವುದೇ ಎನ್‌ಕೌಂಟರ್ ನಡೆದ ಬಳಿಕ, ಆ ಕುರಿತಂತೆ ತನಿಖೆ ನಡೆಯಲಿರುವುದರಿಂದ ಈಗಲೇ ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ.

ಹೈದರಾಬಾದ್ ತರುಣಿಯ ಬರ್ಬರ ಅತ್ಯಾಚಾರ ಮತ್ತು ಸಾವಿಗೆ ಆ ನಾಲ್ವರು ಆರೋಪಿಗಳೇ ಕಾರಣ ಎಂದಾದರೆ ಅವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕಾಗಿದೆ ಮತ್ತು ಸದ್ಯದ ಸ್ಥಿತಿಯಲ್ಲಿ ನ್ಯಾಯವ್ಯವಸ್ಥೆ ಇಂತಹ ಪ್ರಕರಣವನ್ನು ಅತಿ ಶೀಘ್ರ ವಿಚಾರಣೆ ನಡೆಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ನ್ಯಾಯಾಲಯದಿಂದ ಅದು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಸಾರ್ವಜನಿಕರಾಗಲಿ, ಪೊಲೀಸರಾಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ನಮ್ಮ ಕಾನೂನು ಪುಸ್ತಕವೇ ಹೇಳುತ್ತದೆ. ಒಬ್ಬನನ್ನು ಅಪರಾಧಿ ಎಂದು ಘೋಷಿಸಿ ನ್ಯಾಯಾಲಯ ನೀಡಬೇಕಾದ ಶಿಕ್ಷೆಯನ್ನು ನಾವು ಸಾರ್ವಜನಿಕರಿಂದಲೋ ಅಥವಾ ನ್ಯಾಯಾಲಯಕ್ಕೆ ಹೊರತಾದ ಯಾವುದೇ ಸಂಸ್ಥೆಗಳಿಂದ, ವ್ಯಕ್ತಿಗಳಿಂದ ನಿರೀಕ್ಷಿಸುವುದು ಕಾನೂನು ವಿರೋಧಿಯಾಗಿದೆ. ಇಂತಹ ಅಡ್ಡ ದಾರಿ ನಿಧಾನಕ್ಕೆ ನಮ್ಮ ಕೊರಳಿಗೆ ನಾವೇ ಸುತ್ತಿಕೊಳ್ಳುವ ಉರುಳಾಗಿ ಪರಿವರ್ತನೆಯಾಗಬಹುದು. ಒಬ್ಬ ಆರೋಪಿ ನ್ಯಾಯಾಲಯದಲ್ಲಿ ದೋಷಿಯೆಂದು ಘೋಷಣೆಯಾದ ಬಳಿಕವಷ್ಟೇ ಆತನಿಗೆ ಶಿಕ್ಷೆಯಾಗಬೇಕು. ಪೊಲೀಸರ ಕೈಯಲ್ಲಿದ್ದ ಆರೋಪಿಗಳನ್ನು ನ್ಯಾಯಾಲಯ ಕನಿಷ್ಠ ದೋಷಿಗಳೆಂದೇ ಘೋಷಿಸಿಲ್ಲ. ಅಷ್ಟರಲ್ಲೇ ನಾವು ಅವರನ್ನು ‘ಕತ್ತರಿಸಿ, ಕೊಲ್ಲಿ...ನೇಣಿಗೆ ಹಾಕಿ...’ ಎಂದು ಒತ್ತಡಗಳನ್ನು ಹೇರುವುದು ಇಡೀ ತನಿಖೆಯ ದಾರಿಯನ್ನೇ ತಪ್ಪಿಸಬಹುದು. ಹೈದರಾಬಾದ್ ಪ್ರಕರಣದಲ್ಲೂ ಇಂತಹದು ಸಂಭವಿಸಿದೆಯೇ ಎನ್ನುವ ಅವಲೋಕನ ಇಂದಿನ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ.

ಎನ್‌ಕೌಂಟರ್ ನಡೆಸಿದ ಪೊಲೀಸರನ್ನು ಸೂಪರ್‌ಮ್ಯಾನ್‌ಗಳಾಗಿಸುವ ಮೊದಲು, ಈ ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಪೊಲೀಸರು ತೋರಿಸಿದ ಬೇಜವಾಬ್ದಾರಿಗಳನ್ನು ಸ್ಮರಿಸಿಕೊಳ್ಳಬೇಕು. ಮೃತಳ ಸೋದರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಬೇಕಾಗಿದ್ದ ಪೊಲೀಸರು, ‘ಆ ಪ್ರದೇಶ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕೈ ಚೆಲ್ಲಿದ್ದಾರೆ. ಗೃಹ ಸಚಿವರು ಈ ಬಗ್ಗೆ ಹಗುರವಾಗಿ ಪ್ರತಿಕ್ರಿಯಿಸುತ್ತಾ ‘ಸಂತ್ರಸ್ತೆ ತನ್ನ ತಂಗಿಗೆ ಫೋನ್ ಮಾಡುವ ಬದಲು ಪೊಲೀಸ್ ಠಾಣೆಗೆ ಮಾಡಬೇಕಾಗಿತ್ತು’’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಸೋದರಿ ದೂರು ನೀಡಿದಾಕ್ಷಣವೇ ತಮ್ಮ ಪಡೆಗಳ ಮೂಲಕ ಘಟನೆ ನಡೆದ ಸ್ಥಳದಲ್ಲಿ ಕಾರ್ಯಾಚರಣೆಗಿಳಿದಿದ್ದರೆ ಸಂತ್ರಸ್ತೆಯ ಜೀವ ಉಳಿಯುತ್ತಿತ್ತೇನೋ. ಇಷ್ಟಕ್ಕೂ ಘಟನೆ ನಡೆದಿರುವುದು ಮಧ್ಯರಾತ್ರಿಯೇನೂ ಅಲ್ಲ. ರಾತ್ರಿ 9 ಗಂಟೆಯ ಹೊತ್ತಿಗೆ. ಜನರು ರಸ್ತೆಯಲ್ಲಿ ಓಡಾಡುವ ಸಮಯ ಅದು. ಮೇಲ್ನೋಟಕ್ಕೆ ಇದೊಂದು ಪೂರ್ವಯೋಜಿತ ಘಟನೆಯಂತೆಯೂ ಭಾಸವಾಗುತ್ತದೆ.

ಮೊದಲು ಸಂತ್ರಸ್ತೆಯ ಸ್ಕೂಟರ್‌ನ ಟೈರ್ ಪಂಕ್ಚರ್ ಆಗಿದೆ. ಅಂದರೆ ಆಕೆ ಬರುವುದನ್ನು ದುಷ್ಕರ್ಮಿಗಳು ಮೊದಲೇ ನಿರೀಕ್ಷಿಸಿದ್ದರು. ಆಕೆಯ ಪರಿಚಿತರು ಇದರ ಹಿಂದೆ ಇರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಎನ್‌ಕೌಂಟರ್‌ನಿಂದ ಆಗಿರುವ ಒಂದೇ ಒಂದು ಪರಿಣಾಮ, ತನಿಖೆಯ ದಾರಿ ಸಂಪೂರ್ಣ ಮುಚ್ಚಿ ಹೋಗಿರುವುದು. ಘಟನೆ ಬೆಳಕಿಗೆ ಬಂದು ಹೈದರಾಬಾದ್‌ನ ಕಡೆಗೆ ಇಡೀ ದೇಶದ ಗಮನ ಹರಿದಾಗಷ್ಟೇ ಪೊಲೀಸರು ಎಚ್ಚೆತ್ತುಕೊಂಡರು. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆದರೆ ಪಾರದರ್ಶಕವಾದ ವಿಚಾರಣೆಗೆ ಮೊದಲೇ ಅವರು ನಿಗೂಢವಾಗಿ ಪೊಲೀಸರ ‘ಎನ್‌ಕೌಂಟರ್’ಗೆ ಬಲಿಯಾದರು. ಇದೀಗ ನಾವು ಅನಿವಾರ್ಯವಾಗಿ ಪೊಲೀಸರು ಘೋಷಿಸಿದ ಆ ‘ನಾಲ್ವರನ್ನೇ’ ಅಪರಾಧಿಗಳು ಎಂದು ಒಪ್ಪಿಕೊಂಡು, ಅವರಿಗೆ ‘ಶಿಕ್ಷೆಯಾಯಿತು’ ಎಂದು ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆದರೆ ಇಡೀ ಪ್ರಕರಣದಲ್ಲಿ ಆ ನಾಲ್ವರು ಪೊಲೀಸರ ಬಲಿಪಶುವಾಗಿರುವ ಸಾಧ್ಯತೆಗಳಿಲ್ಲವೇ? ಇಡೀ ಪ್ರಕರಣವನ್ನೇ ಮುಚ್ಚಿ ಹಾಕಲು ಯಾವುದೋ ರಾಜಕಾರಣಿಗಳು ಪೊಲೀಸರ ಮೂಲಕ ಇಂತಹದೊಂದು ಕೃತ್ಯವೆಸಗಿರುವ ಸಾಧ್ಯತೆಗಳಿಲ್ಲವೆ? ಇಷ್ಟಕ್ಕೂ ಆರೋಪಿಗಳೆಂದು ಘೋಷಿಸಲ್ಪಟ್ಟವರು ಲಾರಿ ಡ್ರೈವರ್ ಮತ್ತು ಕ್ಲೀನರ್‌ಗಳು. ಇವರನ್ನು ಮುಂದಿಟ್ಟು ನಿಜವಾದ ಗಣ್ಯ ಆರೋಪಿಗಳನ್ನು ಪೊಲೀಸರು ಒಂದು ವೇಳೆ ರಕ್ಷಿಸುವುದಕ್ಕೆ ಪ್ರಯತ್ನಿಸಿದ್ದರೇ? ಅನುಮಾನಾಸ್ಪದ ಎನ್‌ಕೌಂಟರ್ ನಡೆದಾಗ ಇಂತಹದೊಂದು ಪ್ರಶ್ನೆಗಳು ಏಳುವುದು ಸಹಜವಾಗಿದೆ.

ಪೊಲೀಸರು ಬಂಧಿಸಿದಾಕ್ಷಣ ಅವರು ಅಪರಾಧಿಗಳಾಗಲೇ ಬೇಕಾಗಿಲ್ಲ ಎನ್ನುವುದಕ್ಕೆ ನಮ್ಮ ಮುಂದೆ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ದಿಲ್ಲಿಯಲ್ಲಿ ರೈಯಾನ್ ಇಂಟರ್‌ನ್ಯಾಶನಲ್ ಕಾಲೇಜಿನ ಶೌಚಾಲಯದಲ್ಲಿ ಎಳೆ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಯಿತು. ಪೊಲೀಸರು ತನಿಖೆ ನಡೆಸಿ, ಆ ಶಾಲೆಯ ವಿದ್ಯಾರ್ಥಿಗಳನ್ನು ಸಾಗಿಸುವ ಬಸ್ ಕಂಡೆಕ್ಟರ್‌ನ್ನು ಬಂಧಿಸಿದರು. ಬಸ್‌ಕಂಡಕ್ಟರ್ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದಕ್ಕೆ ಯತ್ನಿಸಿದ ವೇಳೆ ಕೊಲೆ ನಡೆದಿದೆ ಎಂದು ಪೊಲೀಸರು ದೋಷಾರೋಪಣೆ ಮಾಡಿದರು. ಈ ಘಟನೆಗೆ ಸಂಬಂಧಿಸಿ ದಿಲ್ಲಿಯ ಜನರು ಆಕ್ರೋಶಗೊಂಡು ಬೀದಿಗಿಳಿದರು. ‘ಬಸ್‌ಕಂಡಕ್ಟರ್‌ನ್ನು ಹೊಡೆದು ಸಾಯಿಸಿ’ ಎಂಬಿತ್ಯಾದಿ ಆದೇಶಗಳೂ ಬೀದಿಯಲ್ಲಿ ಮೊಳಗಿತ್ತು. ಆದರೆ ಬಸ್‌ಕಂಡಕ್ಟರ್‌ನ ಕುಟುಂಬ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಸಿಬಿಐ ಮರು ತನಿಖೆಗೆ ಒಳಪಡಿಸಿದಾಗ ಬಸ್ ಕಂಡಕ್ಟರ್ ಅಮಾಯಕ ಎನ್ನುವ ಅಂಶ ಹೊರಬಿತ್ತು. ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಈ ಕೃತ್ಯ ಎಸಗಿದ್ದು, ಆರೋಪಿಯನ್ನು ರಕ್ಷಿಸಲು ಹಲವು ಗಣ್ಯರು ಹವಣಿಸಿದ್ದು ಬಯಲಾಯಿತು. ಪೊಲೀಸರು ಬಸ್‌ಕಂಡಕ್ಟರ್‌ಗೆ ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪಡೆದಿದ್ದರು. ಹೈದರಾಬಾದ್ ಪ್ರಕರಣವನ್ನು ನಾವು ಈ ಕೋನದಿಂದಲೂ ನೋಡಬೇಕಾಗಿದೆ. ಪರಿಸ್ಥಿತಿಯ ಒತ್ತಡ ಪೊಲೀಸರಿಂದ ಇಂತಹದೊಂದು ಕೃತ್ಯವನ್ನು ಮಾಡಿಸಿತೇ? ಅಥವಾ ಅತ್ಯಾಚಾರದ ಹಿಂದೆ ರಾಜಕಾರಣಿಗಳ ಮಕ್ಕಳಿದ್ದು ಅವರನ್ನು ರಕ್ಷಿಸುವುದಕ್ಕಾಗಿ ಈ ಎನ್‌ಕೌಂಟರ್ ನಡೆಯಿತೇ? ಅಥವಾ ಬಂಧಿತ ದುಷ್ಕರ್ಮಿಗಳು ಅತ್ಯಾಚಾರದಲ್ಲಿ ಬಳಕೆಯಾಗಿದ್ದ ಅಸ್ತ್ರಗಳು ಮಾತ್ರವಾಗಿದ್ದರೇ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಸಿಗದೆ, ಹೈದರಾಬಾದ್ ಸಂತ್ರಸ್ತೆಗೆ ಖಂಡಿತವಾಗಿಯೂ ನ್ಯಾಯಸಿಗಲಾರದು. ಹಾಗಾದರೆ ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗುವ ಬಗೆ ಹೇಗೆ? ಎನ್ನುವ ಪ್ರಶ್ನೆ ಉಳಿದು ಬಿಡುತ್ತದೆ.

ಈ ಪ್ರಕರಣವನ್ನು ನ್ಯಾಯವ್ಯವಸ್ಥೆ ವಿಶೇಷವೆಂದು ಪರಿಗಣಿಸಿ ಒಂದು ವಾರದಲ್ಲಿ ವಿಚಾರಣೆ ನಡೆಸಿ, ರಾತ್ರೋರಾತ್ರಿ ಅವರಿಗೆ ಶಿಕ್ಷೆವಿಧಿಸುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಅದೊಂದು ಐತಿಹಾಸಿಕ ಕ್ರಮವಾಗಿ ಬಿಡುತ್ತಿತ್ತು. ಅದಕ್ಕೆ ಬೇಕಾದ ರಾಜಕೀಯ ಒತ್ತಡವನ್ನು ಸಾರ್ವಜನಿಕರೂ ಹೇರಬೇಕಾಗಿತ್ತು. ಪಾರದರ್ಶಕವಾಗಿ ವಿಚಾರಣೆಯನ್ನು ನಡೆಸುವುದಕ್ಕೆ ಅವಕಾಶವನ್ನೇ ನೀಡದೆ, ಅಸಾಂವಿಧಾನಿಕವಾಗಿ ನಾಲ್ವರನ್ನು ಕೊಂದು ಅದನ್ನು ‘ನ್ಯಾಯ’ ಎಂದು ತೃಪ್ತಿ ಪಟ್ಟರೆ ಖಂಡಿತವಾಗಿಯೂ ಅದು ಇನ್ನಷ್ಟು ಅನ್ಯಾಯಗಳಿಗೆ ದಾರಿ ಮಾಡುತ್ತದೆ. ಈ ದೇಶದಲ್ಲಿ ಪೊಲೀಸರೇ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿ ಕಟಕಟೆಯಲ್ಲಿ ನಿಂತ ಉದಾಹರಣೆಗಳಿವೆ. ನಕಲಿ ಎನ್‌ಕೌಂಟರ್ ಆರೋಪದಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಯಾದ ಹಲವು ಪೊಲೀಸರ ಉದಾಹರಣೆಗಳು ನಮ್ಮ ಮುಂದಿವೆ. ಹೀಗಿರುವಾಗ ಯಾವುದೇ ವಿಚಾರಣೆ ನಡೆಸದೇ ಪೊಲೀಸರೇ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಅವರನ್ನು ಶಿಕ್ಷಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಿ ಎಂದು ಸಾರ್ವಜನಿಕರಿಗೆ ಪೊಲೀಸರೇ ನೀಡುವ ಬಹಿರಂಗ ಕರೆಯಾಗಿದೆ. ಪೊಲೀಸರ ನಕಲಿ ಎನ್‌ಕೌಂಟರ್‌ಗಳನ್ನು ಸಮರ್ಥಿಸುವ ಜನರೇ, ನಾಳೆ ಗುಂಪು ಹತ್ಯೆಯ ಪಾಲುದಾರರಾಗಿ ದೇಶದ ಕಾನೂನಿಗೆ ಸಮಸ್ಯೆಯಾಗುತ್ತಾರೆ.

ಇದೇ ಸಂದರ್ಭದಲ್ಲಿ ಇನ್ನೊಂದು ಪ್ರಶ್ನೆಯೂ ನಮ್ಮ ಮುಂದಿದೆ. ನಿರ್ಭಯಾ ಪ್ರಕರಣ ಇರಲಿ, ದಿಶಾ ಪ್ರಕರಣ ಇರಲಿ, ಆರೋಪಿಗಳು ಬಸ್ ಕ್ಲೀನರ್‌ಗಳು, ಲಾರಿ ಡ್ರೈವರ್‌ಗಳು ಅಲ್ಲದೇ ಇದ್ದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸುತ್ತಿದ್ದರೆ? ಇಂತಹದೊಂದು ಎನ್‌ಕೌಂಟರ್ ನಡೆಯುತ್ತಿತ್ತೆ? ಹೌದು ಎಂದಾದಲ್ಲಿ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಬಂದ ಸಂತ್ರಸ್ತೆಯನ್ನು ಸುಟ್ಟು ಹಾಕುವ ಧೈರ್ಯವನ್ನು ಆರೋಪಿಗಳು ತೋರಿಸುತ್ತಿದ್ದರೆ? ಕಥುವಾ ಪ್ರಕರಣದಲ್ಲಿ ಎಳೆ ಬಾಲೆಯನ್ನು ಎಂಟು ದಿನಗಳ ಕಾಲ ಅತ್ಯಾಚಾರವೆಸಗಿ ಕೊಂದು ಹಾಕಿದ ರಾಕ್ಷಸರನ್ನು ಒಂದು ರಾಜಕೀಯ ಪಕ್ಷ ಬಹಿರಂಗವಾಗಿ ಬೆಂಬಲಿಸುತ್ತಿತ್ತೇ? ಉನ್ನಾವೋದ ಇನ್ನೊಂದು ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆ, ಬಂಧುಗಳು ಕೊಲೆಯಾಗಬೇಕಾಗಿತ್ತೇ? ಸ್ವತಃ ಸಂತ್ರಸ್ತೆಯೇ ಜೀವಭಯದಿಂದ ನರಳುವ ಸ್ಥಿತಿ ಬರುತ್ತಿತ್ತೇ? ಪೊಲೀಸರಲ್ಲಿ ನ್ಯಾಯಾಧೀಶರನ್ನು ಹುಡುಕುವ ನಮ್ಮ ಮನಸ್ಥಿತಿ ಅಂತಿಮವಾಗಿ ಈ ದೇಶವನ್ನು ಪೊಲೀಸ್‌ರಾಜ್ ಆಗಿ ಪರಿವರ್ತಿಸಬಹುದು. ಹೈದರಾಬಾದ್‌ನಲ್ಲಿ ನಡೆದಿರುವುದು ಒಂದು ವೇಳೆ ನಕಲಿ ಎನ್‌ಕೌಂಟರ್ ಆಗಿದ್ದರೆ, ಆ ನಾಲ್ವರ ಜೊತೆಗೆ ನಮ್ಮ ನ್ಯಾಯವ್ಯವಸ್ಥೆಯನ್ನೂ ಬರ್ಬರವಾಗಿ ಕೊಂದು ಹಾಕಲಾಗಿದೆ. ಆ ಕೊಲೆಗಾಗಿ ಜನರು ಸಂಭ್ರಮಿಸುತ್ತಿದ್ದಾರೆಂದರೆ, ನ್ಯಾಯಾಲಯದ ಕುರಿತ ಅವರ ಹತಾಶೆ ಕಾರಣವಾಗಿದೆ. ಆದುದರಿಂದ ನ್ಯಾಯಾಲಯ ತನ್ನ ಎದೆ ಮುಟ್ಟಿಕೊಳ್ಳಬೇಕಾದ ಸಮಯ ಇದು. ಈ ಎನ್‌ಕೌಂಟರ್ ಜೊತೆಗೆ ದಿಶಾ ಅತ್ಯಾಚಾರ ಪ್ರಕರಣದ ತನಿಖೆ ಮುಗಿದು ಹೋಗಬಾರದು. ಎನ್‌ಕೌಂಟರ್ ನಕಲಿಯೋ, ಅಸಲಿಯೋ ಎನ್ನುವುದೂ ಗಂಭೀರ ತನಿಖೆಗೆ ಒಳಪಡಬೇಕು. ಜೊತೆಗೆ ಅತ್ಯಾಚಾರ ಪ್ರಕರಣಗಳನ್ನು ಶೀಘ್ರ ನಿಭಾಯಿಸುವ ಹೊಸದಾರಿಯೊಂದನ್ನು ನಮ್ಮ ನ್ಯಾಯಾಲಯ ಕಂಡುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News