ಫಲಿತಾಂಶದ ಬಳಿಕ ಸರಕಾರ ಪತನಗೊಳ್ಳುವುದಿಲ್ಲ: ಬಸವರಾಜ ಹೊರಟ್ಟಿ

Update: 2019-12-07 15:22 GMT

ಬಾಗಲಕೋಟೆ, ಡಿ.7: ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಬಂದ ಬಳಿಕವೂ ಬಿಜೆಪಿ ಸರಕಾರ ಪತನಗೊಳ್ಳುವುದು ಅನುಮಾನ. ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ಮತ್ತೆ ಆಪರೇಶನ್ ಕಮಲ ಮಾಡಿ, ಸರಕಾರ ಉಳಿಸಿಕೊಳ್ಳುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶನಿವಾರ ಇಲ್ಲಿನ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಏಳು ಸ್ಥಾನ ಗೆದ್ದರೆ ಸರಕಾರಕ್ಕೆ ಏನೂ ಆಗಲ್ಲ. 4 ರಿಂದ 5 ಸ್ಥಾನ ಬಂದರೆ ಗಂಡಾಂತರವಿದೆ. ಆ ವೇಳೆ ಇನ್ನೊಬ್ಬರ ಜೊತೆಗೆ ಸರಕಾರ ರಚಿಸಬೇಕಾಗುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ. ಹೀಗಾಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ರಾಜೀನಾಮೆ ಕೊಡುತ್ತಾರೆ ಎಂಬ ಚರ್ಚೆ ಅಪ್ರಸ್ತುತ ಎಂದರು.

ಯಾರಿಗೂ ಚುನಾವಣೆ ಬೇಕಿಲ್ಲ: ಮೂರು ಪಕ್ಷಗಳ ಶಾಸಕರಿಗೂ ಈಗ ಚುನಾವಣೆಗೆ ಹೋಗಲು ಮನಸ್ಸಿಲ್ಲ. ಚುನಾವಣೆಗೆ ಹೋಗಲೇಬೇಕಾದ ಪ್ರಸಂಗ ಬಂದರೆ, ಯಾರು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಸರಕಾರದ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ ಎಂದು ತಿಳಿಸಿದರು.

ಅನರ್ಹರಿಗೆ ಚುನಾವಣೆಗೆ ನಿಲ್ಲಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಇದು ಪಕ್ಷಾಂತರ ಕಾಯ್ದೆಯಿಂದ ಏನೂ ಆಗಲ್ಲ ಎಂಬ ಭಾವನೆ ಬರುತ್ತಿದೆ. ಯಾವುದೇ ಸಮೀಕ್ಷೆಗಳು ಇಲ್ಲಿಯ ವರೆಗೆ ನಿಖರವಾಗಿ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಸಮೀಕ್ಷೆ ಸುಳ್ಳಾಗಿದೆ.

ಸಮೀಕ್ಷೆಗಳು ಒಂದೇ ತೆರನಾಗಿ ಇರುವುದಿಲ್ಲ. ಒಂದೊಂದು ಏರಿಯಾದಲ್ಲಿ ಒಂದೊಂದು ಸಮೀಕ್ಷೆ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಸಮೀಕ್ಷೆಗಳು 100ಕ್ಕೆ 100ರಷ್ಟು ಒಪ್ಪಲು ಆಗಲ್ಲ. ಈ ಉಪ ಚುನಾವಣೆಯಲ್ಲಿ ಜೆಡಿಎಸ್ 3 ಸ್ಥಾನ ಗೆಲ್ಲುವುದು ಶತಸಿದ್ಧ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News