'ಐಶ್ವರ್ಯಾ ರೈ ನಮ್ಮ ದೇಶದ....': ಈಶ್ವರಪ್ಪ ಹೇಳಿಕೆಗೆ ವಿ.ಎಸ್.ಉಗ್ರಪ್ಪ ತಿರುಗೇಟು

Update: 2019-12-07 15:30 GMT

ಬೆಂಗಳೂರು, ಡಿ.7: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪ ಮಂತ್ರಿಮಂಡಲದಲ್ಲಿರುವ ಬೃಹಸ್ಪತಿಗಳು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇವರಿಬ್ಬರ ನುಡಿಮುತ್ತುಗಳು ನೋಡಿದರೆ ಇವರು ಮಂತ್ರಿಗಳೋ, ಇವರಿಗೆ ಕಾನೂನಿನ ಅರಿವಿದೆಯೋ, ನಾಗರಿಕತೆಯ ಗಂಧ ಇವರಲ್ಲಿ ಇದೆಯೋ ಎಂಬ ಅನುಮಾನ ಕಾಡುತ್ತಿದೆ ಎಂದರು.

ಕಾನೂನು ಸಚಿವರಾಗಿದ್ದುಕೊಂಡು ಚುನಾವಣೆ ಸಂದರ್ಭದಲ್ಲಿ ವೀರಶೈವ ಮತ ಕೇಳುವುದರಲ್ಲಿ ತಪ್ಪೇನು ಎಂದು ಹೇಳುತ್ತಾರೆ. ಕಾನೂನು ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸುವವರು ಜಾತಿಯ ಆಧಾರದಲ್ಲಿ ಮತ ಕೇಳಿದರೆ ತಪ್ಪೇನು ಎಂದು ಉದ್ಧಟತನದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ರಾಜ್ಯ ಹಾಗೂ ದೇಶದಲ್ಲಿ ಚುನಾವಣಾ ಆಯೋಗ ಜೀವಂತವಾಗಿದ್ದಿದ್ದರೆ ಇಷ್ಟೊತ್ತಿಗೆ ಮಾಧುಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು. ಕಾನೂನು ಸಚಿವರಿಗೆ ಇಂಡಿಯನ್ ಪಿನಲ್ ಕೋಡ್, ಪ್ರಜಾಪ್ರತಿನಿಧಿ ಕಾಯ್ದೆ ಬಗ್ಗೆ ಗೊತ್ತಿಲ್ಲ. ಇದನ್ನು ರಾಜ್ಯಪಾಲರಾಗಲಿ, ಚುನಾವಣಾ ಆಯೋಗ ಅಥವಾ ಮುಖ್ಯಮಂತ್ರಿ ಗಮನಿಸಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು. ಮಾಧುಸ್ವಾಮಿ ಸಚಿವರಾಗಿ ಮುಂದುವರೆಯಲು ಲಾಯಕ್ಕಿದ್ದಾರೆಯೇ? ಅವರಿಗೆ ನೆಲದ ಕಾನೂನಿನ ಬಗ್ಗೆ ಗೌರವ ಇದ್ದರೆ ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಚುನಾವಣಾ ಆಯೋಗ ಕಾಲಹರಣ ಮಾಡದೇ ತಕ್ಷಣ ಇವರ ವಿರುದ್ಧ ಪ್ರಕರಣ ದಾಖಲಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಯಡಿಯೂರಪ್ಪ ಹಾಗೂ ರಾಜ್ಯಪಾಲರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಇವರನ್ನು ತಕ್ಷಣ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಮರ್ಯಾದ ಪುರುಷೋತ್ತಮ ಶ್ರೀರಾಮನ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಆತನ ಸಹ ಧರ್ಮಿಣಿ ಸೀತೆ ಎಲ್ಲ ಹೆಣ್ಣುಮಕ್ಕಳ ಪ್ರತೀಕ. ಮಹಿಳೆಯರಿಗೆ ಹೇಗ ಗೌರವ ಕೊಡಬೇಕು ಎಂಬ ಸೌಜನ್ಯತೆ ಈಶ್ವರಪ್ಪಗಿಲ್ಲ. ಸಚಿವರಾಗಿ ಮುಂದುವರೆಯಲು ಇವರು ಅರ್ಹರಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ಐಶ್ವರ್ಯಾ ರೈ ನಮ್ಮ ದೇಶದ ಕೀರ್ತಿಯನ್ನು ವಿಶ್ವಸುಂದರಿ ಸ್ಪರ್ಧೆಯಲ್ಲಿ ಎತ್ತಿ ಹಿಡಿದ ಹೆಣ್ಣುಮಗಳು. ಆಕೆ ಗೃಹಿಣಿ, ತಾಯಿ, ಅವರ ಅತ್ತೆ ಸಂಸತ್ ಸದಸ್ಯರು, ಅವರ ಮಾವ ಸಂಸತ್ತಿನ ಮಾಜಿ ಸದಸ್ಯರು. ದೇಶದ ಅತ್ಯಂತ ಎತ್ತರದ ಸಾಂಸ್ಕೃತಿಕ ರಾಯಭಾರಿಯ ಮನೆಯ ಹೆಣ್ಣುಮಗಳ ಬಗ್ಗೆ ಈಶ್ವರಪ್ಪ ಲಘುವಾಗಿ ಮಾತನಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಉಗ್ರಪ್ಪ ಹೇಳಿದರು.

ಶ್ರೇಣಿಕೃತ ಜಾತಿವ್ಯವಸ್ಥೆ ಹಾಗೂ ಮನುಧರ್ಮ ಶಾಸ್ತ್ರದಲ್ಲಿರುವಂತೆ ಹೆಣ್ಣನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ನೋಡುವ ಪ್ರವೃತ್ತಿ ಇವರ ಮಾತುಗಳಲ್ಲಿ ಕಂಡು ಬರುತ್ತದೆ. ಇದು ಐಶ್ವರ್ಯಾ ಅವರೊಬ್ಬರಿಗೆ ಮಾತ್ರ ಆಗಿರುವ ಅವಮಾನ ಅಲ್ಲ, ಇಡೀ ಹೆಣ್ಣು ಕುಲಕ್ಕೆ ಆಗಿರುವ ಅವಮಾನ. ಬಿಜೆಪಿಯವರಿಗೆ ಕಿಂಚಿತ್ತಾದರೂ ಭಾರತದ ಸಂಸ್ಕೃತಿಯ ಬಗ್ಗೆ ಗೌರವ ಇದ್ದರೆ, ಕೂಡಲೇ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News