ಚಿನ್ನದಂಗಡಿ ಮಾಲಕನನ್ನು ಬೆದರಿಸಿ ಲಕ್ಷಾಂತರ ರೂ. ವಂಚನೆ: ಮಹಿಳೆ ಸೇರಿ ಐವರ ಬಂಧನ

Update: 2019-12-07 17:36 GMT

ವಿಜಯಪುರ, ಡಿ.7: ವಿಜಯಪುರ ನಗರದ ಆಭರಣ ಮಳಿಗೆ ಮಾಲಕನನ್ನು ಮನೆಯಲ್ಲಿ ಕೂಡಿಹಾಕಿ ಬೆದರಿಕೆ ಹಾಕಿ ಲಕ್ಷಾಂತರ ರೂ. ವಸೂಲಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ಅಮೃತ ನಿಕ್ಕಂ ಅವರು, ದೂರು ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿರಿಸಲಾಗಿದ್ದು, ಮಾನಸಿಕ ಹಿಂಸೆ, ಜೀವದ ಬೆದರಿಕೆ ಹಾಗೂ ಕೋಣೆಯೊಂದರಲ್ಲಿ ಕೂಡಿ ಹಾಕಿ ಲಕ್ಷಾಂತರ ರೂ. ಹಣ ವಸೂಲಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಾನಮ್ಮ, ಸುಧೀರ ವಿವೇಕಾನಂದ, ರವಿ ಕಾರಜೋಳ, ಮಲ್ಲಿಕಾರ್ಜುನ ಚೆನ್ನಪ್ಪ, ಸಿಂದಗಿ ಶ್ರೀಕಾಂತ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವಾರು ಜನರ ಪಾತ್ರ ಇರುವ ಬಗ್ಗೆ ತನಿಖೆ ನಡೆಯುತ್ತಿದೆ. ಬಂಧಿತ ಆರೋಪಿಗಳಿಂದ ದೂರುದಾರನಿಂದ ದರೋಡೆ ಮಾಡಿದ ಬಂಗಾರದ ಉಂಗುರ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ 15 ಲಕ್ಷ ರೂ. ನಗದು ಹಾಗೂ ಪ್ರಕರಣಕ್ಕೆ ಬಳಸಿದ್ದರು ಎನ್ನಲಾದ ಕಾರು, ಒಂದು ಮೋಪೆಡ್ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು. 

ಏನಿದು ಘಟನೆ?

ಘಟನೆಯ ಕುರಿತು ವಿವರಣೆ ನೀಡಿದ ಅವರು, ಬಂಧಿತಳಾಗಿರುವ ಮಹಿಳಾ ಆರೋಪಿ ದೂರುದಾರನ ಬಂಗಾರದ ಅಂಗಡಿಗೆ ಭೇಟಿ ನೀಡಿ ಸ್ನೇಹ ಬೆಳೆಸಿದ್ದಳು. ಹೀಗೆ ಮಾಲಕನನ್ನು ಮನೆಗೆ ಕರೆಸಿ ಕೋಣೆಯೊಂದರಲ್ಲಿ ಕೂಡಿ ಹಾಕಿ ಅವರಿಗೆ ಸಂಬಂಧಿಸಿದ ಚಿತ್ರಗಳನ್ನು ಕ್ಲಿಕ್ ಮಾಡಿ ವೈರಲ್ ಮಾಡುವುದಾಗಿ ಹೇಳಿ ಹೆದರಿಸಿದ್ದರು. ಜೀವ ಬೆದರಿಕೆ ಹಾಕಿದ್ದಾರೆ, ಜೇಬಿನಲ್ಲಿದ್ದ 9 ಸಾವಿರ ರೂ. ನಗದು, ಪಾನ್‍ ಕಾರ್ಡ್, ಆಧಾರ್ ಕಾರ್ಡ್ ಕಿತ್ತುಕೊಂಡು ಹೊರಗಡೆ ಬಿಡಲು 25 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದಾರೆ. ಅದರ ಪೈಕಿ 15 ಲಕ್ಷ ರೂ.ಗಳನ್ನು ತರಿಸಿಕೊಂಡಿದ್ದಾರೆ. ನಂತರ ಉಳಿದ ಹಣವನ್ನು ಕೊಡಿ ಎಂದು ಫೋನ್‍ನಲ್ಲಿ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಬಂಗಾರ ಅಂಗಡಿ ಮಾಲಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು, ದೂರು ದಾಖಲಾದ 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದರು. 

ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ಈ ಪ್ರಕರಣವನ್ನು 24 ಗಂಟೆಯೊಳಗಾಗಿ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಾದ ಮಹಾಂತೇಶ ದ್ಯಾಮಣ್ಣವರ, ಆನಂದ ಠಕ್ಕನ್ನವರ, ಬಿ.ಐ. ಹಿರೇಮಠ, ಜಿ.ಬಿ. ಬಿರಾದಾರ, ಮಹಿಳಾ ಎಎಸ್‍ಐ ಗಂಗೂ ಬಿರಾದಾರ, ಸಿಬ್ಬಂದಿಗಳಾದ ವಿ.ಎಸ್.ನಾಗಠಾಣ, ಎಂ.ಎನ್.ಮುಜಾವರ, ಜಿ.ವೈ. ಹಡಪದ, ಆರ್.ಡಿ.ಅಂಜುಟಗಿ, ಎಲ್.ಎಸ್.ಹಿರೇಗೌಡರ, ಎಸ್.ಬಿ.ಜೋಗಿ ನೇತೃತ್ವದ ತಂಡದ ಕಾರ್ಯವನ್ನು ಶ್ಲಾಘಿಸಲಾಗಿದ್ದು, ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್.ಪಿ. ಪ್ರಕಾಶ ಅಮೃತ ನಿಕ್ಕಂ ಪ್ರಶಂಸಿದರು.

ವಿಜಯಪುರ ಉಪವಿಭಾಗದ ಡಿವೈಎಸ್‍ಪಿ ಲಕ್ಷ್ಮೀನಾರಾಯಣ, ಸಿಪಿಐ ಮಹಾಂತೇಶ ದ್ಯಾಮಣ್ಣವರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News