ಅನರ್ಹರ ‘ರಾಜಕೀಯ ಭವಿಷ್ಯ’ ನಾಳೆ ನಿರ್ಧಾರ: ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ

Update: 2019-12-08 13:50 GMT

ಬೆಂಗಳೂರು, ಡಿ. 8: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹಾಗೂ ಅನರ್ಹ ಶಾಸಕರ ಮುಂದಿನ ‘ರಾಜಕೀಯ ಭವಿಷ್ಯ’ ನಿರ್ಧರಿಸಲಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಕಾರ್ಯ ನಾಳೆ(ಡಿ.9) ಬೆಳಗ್ಗೆ 8ರಿಂದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಮತ ಎಣಿಕೆಗೆ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.

ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಆ ಬಳಿಕ ಇವಿಎಂಗಳ ಮತ ಎಣಿಕೆ ನಡೆಯಲಿದೆ. ಎಲ್ಲ ಎಣಿಕೆ ಕೇಂದ್ರಗಳಲ್ಲಿ 14 ಮೇಜುಗಳನ್ನು ಅಳವಡಿಸಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಮಾತ್ರ 21 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಟೇಬಲ್ ವ್ಯವಸ್ಥೆ: ಪ್ರತಿ ಮತಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿರುತ್ತದೆ. ಆಯಾ ಮತಕ್ಷೇತ್ರಗಳ ಮತಗಟ್ಟೆ ಸಂಖ್ಯೆ ಆಧಾರದಲ್ಲಿ ಗರಿಷ್ಠ 21 ಸುತ್ತಿನಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಆಯೋಗದ ಅನುಮತಿಯ ನಂತರವೇ ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಮತ ಎಣಿಕೆ ಕೇಂದ್ರಗಳ ಉಸ್ತುವಾರಿಗಾಗಿ ಎಲ್ಲ ಕಡೆಗಳಲ್ಲಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಪ್ರತಿಯೊಂದು ಟೇಬಲ್‌ಗೂ ಎಣಿಕೆ ಸಹಾಯಕರು ಕಾರ್ಯ ನಿರ್ವಹಿಸಲಿದ್ದು, ಪ್ರತಿಯೊಂದು ಕೇಂದ್ರದಲ್ಲಿಯೂ ಸೂಕ್ಷ್ಮ-ಅತಿಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಮೊಬೈಲ್ ನಿಷೇಧ: ಅಭ್ಯರ್ಥಿಗಳ ಏಜೆಂಟರು, ಕೌಂಟಿಂಗ್ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ಮೊಬೈನ್‌ಫೋನ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದುರಿಂದ ಯಾರೂ ಮೊಬೈಲ್ ಗಳನ್ನು ಎಣಿಕೆ ಕೇಂದ್ರಕ್ಕೆ ಕೊಂಡೊಯ್ಯಂತಿಲ್ಲ ಎಂದು ಸೂಚಿಸಲಾಗಿದೆ.

ಮಾಧ್ಯಮ ಪ್ರತಿನಿಧಿಗಳು ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದ್ದು, ಅವರು ಮಾಧ್ಯಮ ಕೇಂದ್ರಗಳಲ್ಲಿ ಮಾತ್ರ ಮೊಬೈಲ್ ಬಳಸಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಮತ ಎಣಿಕೆ ಕೊಠಡಿಗಳಿಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಆಯೋಗ ನಿರ್ದೇಶನ ನೀಡಿದೆ.

ಅಭ್ಯರ್ಥಿ ಅಥವಾ ಏಜೆಂಟರಿಗೆ ಮತ ಎಣಿಕೆ ಸ್ಥಳಕ್ಕೆ ಪ್ರವೇಶಿಸಲು ನಿರ್ಬಂಧ ಹೇರಿದ್ದು, ಅವರಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಎಣಿಕಾ ಏಜೆಂಟರಿಗೆ ಕೇಂದ್ರದಲ್ಲಿ ಕುಳಿತು ಕೊಳ್ಳಲು ಕುರ್ಚಿಯ ವ್ಯವಸ್ಥೆ ಇರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ನಿಷೇಧಾಜ್ಞೆ ಜಾರಿ: ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪೊಲೀಸ್ ಸಿಬ್ಬಂದಿ ಜತೆಗೆ ಕೆಎಸ್‌ಆರ್‌ಪಿ ತುಕಡಿ ಹಾಗೂ ಅರೆಸೇನಾ ಪಡೆಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಮೊಕ್ಕಾಂ ಹೂಡಲಿದ್ದಾರೆ.

ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿ.8 ಮಧ್ಯರಾತ್ರಿ 12ಗಂಟೆಯಿಂದ ಡಿ.9ರ ಮಧ್ಯರಾತ್ರಿವರೆಗೂ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ.

ಮತ ಎಣಿಕೆ ಕೇಂದ್ರಗಳು: ಅಥಣಿ, ಕಾಗವಾಡ, ಗೋಕಾಕ್ ಕ್ಷೇತ್ರಗಳ ಮತ ಎಣಿಕೆ ಬೆಳಗಾವಿಯ ವಾಸುದೇವ ಸೀತಾರಾಮ್ ಗೌತಮ್ ವಿದ್ಯಾಭವನ, ಯಲ್ಲಾಪುರ-ಶಿರಸಿಯ ಎಂಇಎಸ್ ಕಾಲೇಜು, ಹಿರೇಕೆರೂರು ಹಾಗೂ ರಾಣೆಬೆನ್ನೂರು- ಹಾವೇರಿ ಸರಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

ವಿಜಯನಗರ- ಬಳ್ಳಾರಿಯ ಸರಕಾರಿ ಪಾಲಿಟೆಕ್ನಿಕ್, ಚಿಕ್ಕಬಳ್ಳಾಪುರ- ಚಿಕ್ಕಬಳ್ಳಾಪುರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಆರ್.ಪುರಂ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಮತ ಎಣಿಕೆ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯ ಸೈಂಟ್ ಜೋಸೆಫ್ ಶಾಲೆಯಲ್ಲಿ ನಡೆಯಲಿದೆ. ಯಶವಂತಪುರ-ಬೆಂಗಳೂರಿನ ಆರ್.ವಿ.ಎಂಜಿನಿಯರಿಂಗ್ ಕಾಲೇಜು, ಶಿವಾಜಿನಗರ-ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜು, ಹೊಸಕೋಟೆ ಕ್ಷೇತ್ರದ ಎಣಿಕೆ ಕಾರ್ಯವು ದೇವನಹಳ್ಳಿಯ ಅಶೋಕ ಇಂಟರ್‌ನ್ಯಾಷನಲ್ ಸ್ಕೂಲ್, ಕೆ.ಆರ್.ಪೇಟೆ-ಮಂಡ್ಯದ ಸರಕಾರಿ ಪಾಲಿಟೆಕ್ನಿಕ್ ಹಾಗೂ ಹುಣಸೂರು ಕ್ಷೇತ್ರದ್ದು ಹುಣಸೂರಿನ ಡಿ.ದೇವರಾಜ ಅರಸು ಪದವಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳು ಸೇರಿ ಬೆಳಗಾವಿಯ ಮೂರು ಕ್ಷೇತ್ರಗಳ ಮತ ಎಣಿಕೆ ಕಾರ್ಯದ ಭದ್ರತೆಗೆ 750 ಮಂದಿಯನ್ನು ನಿಯೋಜಿಸಲಾಗಿದೆ. ಬೆಳಗಾವಿ ತಾಲೂಕಿನಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ. ಶಾಂತಿಯುತ ಮತ ಎಣಿಕೆಗೆ ಕ್ರಮ ಕೈಗೊಳ್ಳಲಾಗಿದೆ

-ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News