‘ಆಪರೇಷನ್ ಕಮಲ’ದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದು ಹೀಗೆ...

Update: 2019-12-08 12:42 GMT

ಹುಬ್ಬಳ್ಳಿ, ಡಿ. 9: ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗದಿದ್ದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಾವು ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮದು ರಾಜಕೀಯ ಪಕ್ಷ. ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಬರುವ ಎಲ್ಲರನ್ನು ಸ್ವಾಗತಿಸುತ್ತದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದಿಂದ ಯಾರೇ ಬಂದರೂ ಅವರನ್ನು ನಾವು ಬೇಡ ಎನ್ನುವುದಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮೊದಲು ತಮ್ಮ ಪಕ್ಷದ ಶಾಸಕರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಿಜೆಪಿಯನ್ನು ದೂರುವ ಕೆಲಸ ಸರಿಯಲ್ಲ ಎಂದು ಆಕ್ಷೇಪಿಸಿದ ನಳಿನ್‌ ಕುಮಾರ್ ಕಟೀಲ್, ಆ ಪಕ್ಷದ ಶಾಸಕರೇ ಬಂದರೆ ನಾವೇನು ಮಾಡಬೇಕು ಎಂದು ಕೇಳಿದರು.

15 ಸ್ಥಾನಗಳಲ್ಲಿ ಗೆಲುವು: ಉಪಚುನಾವಣೆಗೆ ಪ್ರಚಾರಕ್ಕೆ ಹೋದಲೆಲ್ಲ ನಮ್ಮ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜನರಲ್ಲಿಯೂ ಬಿಜೆಪಿ ಅಲೆಯಿದ್ದು, 15 ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹದಿನೇಳು ಮಂದಿ ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರಿಗೂ ನ್ಯಾಯ ಕೊಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ಶಾಸಕರಲ್ಲಿ ಯಾರಲ್ಲಿಯೂ ಅಸಮಾಧಾನವಿಲ್ಲ ಎಂದು ನಳಿನ್‌ ಕುಮಾರ್ ಕಟೀಲ್ ತಿಳಿಸಿದರು.

‘ಬಿಜೆಪಿ ಸರಕಾರ ಸ್ಥಿರವಾಗಿದ್ದು, ಉಪಚುನಾವಣೆ ಫಲಿತಾಂಶದ ಬಳಿಕವೂ ಸರಕಾರ ಸ್ಥಿರವಾಗಿಯೇ ಇರಲಿದೆ. ಯಾರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಬಗ್ಗೆ ಪಕ್ಷದ ಹಿರಿಯಲು ತೀರ್ಮಾನಿಸಲಿದ್ದು, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ’

-ನಳಿನ್‌ಕುಮಾರ್, ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News