'ಅನರ್ಹ ಶಾಸಕ ಎಚ್.ವಿಶ್ವನಾಥ್ ಸೋತರೆ...': ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದ್ದು ಹೀಗೆ...

Update: 2019-12-08 15:50 GMT

ಮೈಸೂರು,ಡಿ.8: ಹುಣಸೂರು ಉಪಚುನಾವಣೆಯಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ಸೋತರೆ ಜಗತ್ತು ಮುಳುಗೋಗುತ್ತಾ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಾಧ್ಯಮದವರನ್ನೇ ಪ್ರಶ್ನಿಸಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಣಸೂರು ಕ್ಷೇತ್ರದ ಸೋಲು ಗೆಲುವಿನ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಅನರ್ಹ ಶಾಸಕ ಎಚ್.ವಿಶ್ವನಾಥ್ ಸೋತರೆ ಪ್ರಪಂಚ ಮುಗಳುಗೋಗುತ್ತಾ ? ಮಾಜಿ ಸಿಎಂ ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದೋಗಿಲ್ಲ ಹೇಳಿ, ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಸೋತರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಹುಣಸೂರಿನಲ್ಲಿ ವಿಶ್ವನಾಥ್ ಜಯಗಳಿಸಲಿದ್ದಾರೆ. ಒಂದು ವೇಳೆ ವಿಶ್ವನಾಥ್ ಸೋತರೆ ಪ್ರಪಂಚ ಮುಳುಗಿ ಹೋಗುವುದಿಲ್ಲ, ಹುಣಸೂರು ಉಪಚುನಾವಣೆ ಸೋತರೂ ಏನು ಪರಿಣಾಮ ಬೀರುವುದಿಲ್ಲ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ. ಮುಂದಿನ ಮೂರುವರೆ ವರ್ಷ ಸರ್ಕಾರ ಸುಭದ್ರವಾಗಿರಲಿದೆ ಎಂದು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದವರು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದೆವು ಎಂಬುದನ್ನು ಜನರ ಮುಂದೆ ಹೇಳಿದ್ದಾರೆ. ಪ್ರತಿಪಕ್ಷಗಳೂ ಕೂಡ ತಮ್ಮ ನಿಲುವನ್ನು ಹೇಳಿವೆ. ಎಲ್ಲವನ್ನೂ ಜನರು ತೀರ್ಮಾನ ಮಾಡಿದ್ದಾರೆ. ನಾಳೆ ಫಲಿತಾಂಶ ಹೊರಬೀಳಲಿದೆ. ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ನಾಳಿನ ಫಲಿತಾಂಶವನ್ನು ಎಲ್ಲರೂ ಕುತೂಹಲದಿಂದ ಕಾಯುತಿದ್ದಾರೆ. ಇದು ಜನತೆಗೆ ಬಿಟ್ಟ ವಿಚಾರ. ಅನರ್ಹರ ಬಗ್ಗೆ ಜನರ ಮನಸ್ಥಿತಿ ಏನಿದೆ ಅಂತ ನಾಳೆ ಗೊತ್ತಾಗಲಿದೆ. ಸರ್ಕಾರ ಸ್ಥಿರವಾಗಿದೆ. ನಾಳೆ ಹೆಚ್ಚು ಗೆದ್ದು ಮತ್ತಷ್ಟು ಸ್ಥಿರ ಆಗಲಿದೆ. ಚುನಾವಣೆ ಮುಗಿದ ಮೇಲೆ, ಸಿದ್ದರಾಮಯ್ಯ ವೈಟ್ ವಾಶ್ ಆಗಲಿದ್ದಾರೆ. ಸೋಲುವವರ ಬಗ್ಗೆ ಈಗ ಮಾತನಾಡೋದು ಬೇಡ. ಗೆದ್ದವರೆಲ್ಲರಿಗೂ ಮಂತ್ರಿಭಾಗ್ಯ ಅಂತ ಸ್ವತಃ ಸಿಎಂ ಹೇಳಿದ್ದಾರೆ. ಬಿಜೆಪಿ ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News