ತ್ಯಾಜ್ಯ ನೀರು ಶುದ್ಧೀಕರಣ ಘಟಕದ ನಿರೀಕ್ಷೆಯಲ್ಲಿ ಉಳ್ಳಾಲ

Update: 2019-12-09 07:19 GMT

ಮಂಗಳೂರು,ಡಿ.8: ದಿನದಿಂದ ದಿನಕ್ಕೆ ಸಮಸ್ಯೆಯಾಗಿ ಕಾಡುವ, ಒಳರಸ್ತೆಯುದ್ದಕ್ಕೂ ಹರಿದಾಡುವ ತ್ಯಾಜ್ಯ ನೀರಿನಿಂದ ಕಂಗೆಟ್ಟಿರುವ ಉಳ್ಳಾಲದ ನಾಗರಿಕರು ಮಲಿನ ನೀರು ಶುದ್ಧೀಕರಣದ ಘಟಕದ ನಿರೀಕ್ಷೆಯಲ್ಲಿದ್ದಾರೆ. ಶೀಘ್ರ ಈ ಘಟಕ ನಿರ್ಮಿಸದೆ ಇದ್ದರೆ ಉಳ್ಳಾಲವು ತ್ಯಾಜ್ಯ ನೀರುಮಯ ಪ್ರದೇಶವಾಗಬಹುದು ಎಂಬ ಆತಂಕ ಸ್ಥಳೀಯರಿಗೆ ಕಾಡತೊಡಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ಕೋಡಿ ಮತ್ತು ಕಲ್ಲಾಪುವಿನಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾ ಗಿತ್ತು. ಆದರೆ, ಕೆಲವು ಮಂದಿಯ ಅಪಸ್ವರದಿಂದಾಗಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಅವರ ಮನ ಒಲಿಸುವುದು ಇದೀಗ ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ.

ನಾಡಿನ ಬಹುತೇಕ ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯು ದಿನದಿಂದ ದಿನಕ್ಕೆ ಸಮಸ್ಯೆಯಾಗಿ ಕಾಡುತ್ತಿದ್ದು, ಉಳ್ಳಾಲವೂ ಹೊರತಲ್ಲ. ಮನೆ, ಕಟ್ಟಡ, ಕೈಗಾರಿಕೆಗಳ ತ್ಯಾಜ್ಯ ನೀರು ಎಲ್ಲೆಂದೆರಲ್ಲಿ ಹರಿದು ಪರಿಸರವನ್ನು ಕಲುಷಿತಗೊಳಿಸುತ್ತದೆ. ಈ ನಿಟ್ಟಿನಲ್ಲಿ ಸರಕಾರವು ಹೊಸ ಪ್ರಯೋಗಗಳ ಮೂಲಕ ತ್ಯಾಜ್ಯ ನಿರ್ವಹಣೆಗೆ ಪರಿಹಾರ ಎಂಬಂತೆ ಒಳಚರಂಡಿ ನಿರ್ಮಾಣದೊಂದಿಗೆ ಹೊಸ ತಂತ್ರಜ್ಞಾನಗಳಿಗೆ ಮೊರೆ ಹೋಗಿತ್ತು.

ಮಂಡಲ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹೀಗೆ ಹಂತ ಹಂತವಾಗಿ ಮೇಲೇರಿದ ಉಳ್ಳಾಲವು ಇದೀಗ ಜನನಿಬಿಡ ಪ್ರದೇಶವಾಗಿ ಮಾರ್ಪಟ್ಟಿವೆ. ಅಲ್ಲಲ್ಲಿ ವಸತಿ-ವಾಣಿಜ್ಯ ಸಂಕೀರ್ಣ, ಶಾಲಾ-ಕಾಲೇಜುಗಳ ನಿರ್ಮಾಣ, ಅಂಗಡಿಮುಂಗಟ್ಟುಗಳು ತಲೆ ಎತ್ತುತ್ತಿವೆ. ಸಹಜವಾಗಿ ಪರಿಸರ ಮಾಲಿನ್ಯದ ಅಪಾಯವೂ ಇದೆ. ಜನರು ಬಳಸಿದ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲೇ ಹರಿದು ದುರ್ವಾಸನೆಗೆ ಹೇತುವಾಗುತ್ತಿದೆ. ಆ ಹಿನ್ನಲೆಯಲ್ಲಿ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ವಿನೂತನ ಮಾದರಿಯ ಒಳಚರಂಡಿ ವ್ಯವಸ್ಥೆಗೆ ಕೆಲವು ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ಅದರಂತೆ ಆರ್‌ಸಿಸಿ ಮ್ಯಾನ್‌ಹೋಲ್‌ಗಳು ಹಾಗೂ ಸೀವರ್ ಲೈನ್‌ಗಳನ್ನು ಈಗಾಗಲೆ ಅಳವಡಿಸಲಾಗಿದೆ.

ಇದು ಅತ್ಯಂತ ಸುಸಜ್ಜಿತ ಮತ್ತು ಆಧುನಿಕ ತಂತ್ರಜ್ಞಾನದಿಂದ ಕೂಡಿದ ಒಳಚರಂಡಿ ವ್ಯವಸ್ಥೆಯಾದ ಕಾರಣ ಸಾರ್ವಜನಿಕರಲ್ಲಿ ತೀವ್ರ ಕುತೂಹಲವೂ ಇತ್ತು. ಅಂದರೆ ಹೂದೋಟ ಮಾದರಿಯ ಮಲಿನ ನೀರು ಶುದ್ಧೀಕರಣ ಘಟಕಗಳು ಈ ಯೋಜನೆಯ ಪ್ರಮುಖ ಮೈಲುಗಲ್ಲಾಗಿವೆ. ಇದು ಕೇವಲ ಹೂದೋಟ ಮಾದರಿಯ ಮಲಿನ ನೀರು ಶುದ್ಧೀಕರಣ ಘಟಕಗಳಲ್ಲ. ಹೂದೋಟವನ್ನಾಗಿಯೂ ಇದನ್ನು ಬಳಸಬಹುದಾಗಿದೆ. ಸುಮಾರು 10 ವರ್ಷದ ಹಿಂದೆಯೇ ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಕಳೆದ ಮೂರುವರೆ ವರ್ಷದಿಂದ 60.50 ಕಿ.ಮೀ. ಉದ್ದದಲ್ಲಿ ಸೀವರ್ ಲೈನ್ ಅಳವಡಿಕೆ, 2,228 ಆರ್‌ಸಿಸಿ ಮ್ಯಾನ್‌ಹೋಲ್‌ಗಳ ನಿರ್ಮಾಣವೂ ಆಗಿವೆ. ಆದರೆ ಉಳ್ಳಾಲದ ಕೋಡಿ ಮತ್ತು ಕಲ್ಲಾಪಿನಲ್ಲಿ ಮಲಿನ ನೀರು ಶುದ್ಧೀಕರಣ ಘಟಕ ತೆರೆಯಲು ಇದ್ದ ಅಡ್ಡಿ-ಆತಂಕ ಇನ್ನೂ ನಿವಾರಣೆಯಾಗಿಲ್ಲ. ಕಲ್ಲಾಪುವಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಘಟಕ ಸ್ಥಾಪನೆಯ ಜಮೀನಿಗೆ ಸಂಬಂಧಿಸಿ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಎದುರಾದ ತೊಡಕು ಹಾಗೆಯೇ ಮುಂದುವರಿದಿದೆ. ಉಳ್ಳಾಲ ಕೋಡಿಯಲ್ಲಿ ಆಡಳಿತಾತ್ಮಕ ಸಮಸ್ಯೆ ಇಲ್ಲದಿದ್ದರೂ ಕೂಡ ಕೆಲವು ಮಂದಿಯ ವಿರೋಧ ನಗರಸಭಾ ವ್ಯಾಪ್ತಿಯ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶದ ಘಟಕ ನಿರ್ಮಾಣಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಗುತ್ತಿಗೆ ವಹಿಸಿಕೊಂಡ ಕಂಪೆನಿಯು ಇತ್ತೀಚೆಗೆ ಕಾಮಗಾರಿ ಆರಂಭಿಸಲು ಮುಂದಾದಾಗ ಕೆಲವರ ಅಪಸ್ವರದಿಂದ ಬರಿಗೈಯಲ್ಲಿ ವಾಪಸ್ ಆಗಿವೆ ಎಂದು ತಿಳಿದು ಬಂದಿದೆ.

ಅಕ್ರಮ ಜೋಡಣೆ

ಉಳ್ಳಾಲ ಒಳಚರಂಡಿ ಯೋಜನೆಯಡಿ ನಿರ್ಮಿಸಲಾಗುವ ಈ ಘಟಕ ಮತ್ತು ಇತರ ಕಾಮಗಾರಿಗಳನ್ನು 5 ವರ್ಷಗಳ ನಿರ್ವಹಣೆಯೊಂದಿಗೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ವಹಿಸಲಾಗಿದೆ. 2021ರೊಳಗೆ ಕಾಮಗಾರಿ ಪೂರ್ಣಗೊಂಡು ಸಂಪೂರ್ಣ ವ್ಯವಸ್ಥೆಯು ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ಉದ್ದೇಶವೂ ಇದೆ. ಆದರೆ ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪನೆಗೊಳ್ಳದ ಕಾರಣ ಈಗಾಗಲೆ ಹಲವು ಮನೆಯವರು, ವಸತಿ-ವಾಣಿಜ್ಯ ಸಂಕೀರ್ಣ, ಅಂಗಡಿಮುಂಗಟ್ಟಿನವರು ಅನಧಿಕೃತವಾಗಿ ಒಳಚ ರಂಡಿಗೆ ಮಲಿನ ನೀರು ಹರಿಯ ಬಿಟ್ಟಿದ್ದಾರೆ ಎಂಬ ಮಾಹಿತಿ ಇದೆ. ಉಳ್ಳಾಲಕ್ಕೆ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣದ ಅಗತ್ಯವಿದ್ದು, ಇದನ್ನು ಸದುಪಯೋಗಪಡಿಸುವ ಅಗತ್ಯವಿದೆ ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಅಭಿಪ್ರಾಯಪಡುತ್ತಿವೆ.

ಎಸ್‌ಬಿಟಿ ಟೆಕ್ನಾಲಜಿ ಆಧಾರಿತ ಘಟಕಗಳು

ಉಳ್ಳಾಲ ಕೋಡಿ ಹಾಗೂ ಕಲ್ಲಾಪುವಿನಲ್ಲಿ ನಿರ್ಮಾಣ ವಾಗಲಿರುವ ಈ ಮಲಿನ ನೀರು ಶುದ್ಧೀಕರಣ ಘಟಕಗಳು ಎಸ್‌ಬಿಟಿ (ಸಾಯಿಲ್ ಬಯೋ ಟೆಕ್ನಾಲಜಿ- ಹೂದೋಟ ಮಾದರಿ) ತಂತ್ರಜ್ಞಾನದಿಂದ ಕೂಡಿದೆ. ಕೋಡಿಯಲ್ಲಿ 4.40 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಮತ್ತು ಕಲ್ಲಾಪುವಿನಲ್ಲಿ 1.70 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ನಿರ್ಮಾಣ ಸಹಿತ ಒಳಚರಂಡಿ ಯೋಜನೆಗೆ 65.71 ಕೋ.ರೂ. ಮೊತ್ತ ನಿಗದಿಪಡಿಸಿತ್ತು. ಅದರಂತೆ 29 ಕೋ.ರೂ.ಮೊತ್ತದಲ್ಲಿ ಆರ್‌ಸಿಸಿ ಮ್ಯಾನ್‌ಹೋಲ್‌ಗಳು ಹಾಗೂ ಸೀವರ್‌ಲೈನ್ ಅಳವಡಿಸಲಾಗಿದೆ. ಉಳಿದಂತೆ ಈ ಯೋಜನೆಯಡಿ 8 ವೆಟ್‌ವೆಲ್‌ಗಳನ್ನು ನಿರ್ಮಿಸಲಾಗುತ್ತಿದೆ.

►ಸುಮಾರು 2.17 ಎಕರೆ ಪ್ರದೇಶದಲ್ಲಿ ಈ ಘಟಕವು ನಿರ್ಮಾಣಗೊಂಡ ಬಳಿಕ ಸಂಪೂರ್ಣವಾಗಿ ಸುಂದರ ಹೂದೋಟದಂತೆ ಕಾಣಲಿದೆ. ಈ ಘಟಕ ನಿರ್ಮಾಣಕ್ಕೆ ಇತರ ತಂತ್ರಜ್ಞಾನಕ್ಕಿಂತ ಕಡಿಮೆ ಜಮೀನು ಸಾಕಾಗುತ್ತದೆ. ಈ ಮಲಿನ ನೀರು ಶುದ್ಧೀಕರಣ ಘಟಕವು ಹೊರಹಾಕುವ ನೀರು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಗುಣಮಟ್ಟ ಹಾಗೂ ಮಾನದಂಡದ ಪರಿಮಿತಿಯೊಳಗಿರಲಿದೆ. ಇದರ ನಿರ್ವಹಣೆಯೂ ಸುಲಭವಾಗಿದೆ. ವಿದ್ಯುತ್ ಖರ್ಚು ಕೂಡಾ ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದೊಂದು ಪರಿಸರ ಸ್ನೇಹಿ ತಂತ್ರಜ್ಞಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಘಟಕದಲ್ಲಿ ಯಾವುದೇ ರೀತಿಯ ಜೈವಿಕ ಕೆಸರು ಉತ್ಪಾದನೆ ಇರುವುದಿಲ್ಲ. ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಗಿಡಮರಗಳಿಗೆ ಗೊಬ್ಬರವಾಗಿ ಬಳಕೆ ಕೂಡಾ ಮಾಡಬಹುದಾಗಿದೆ. ಈ ಘಟಕದಲ್ಲಿ ಮಲಿನ ತ್ಯಾಜ್ಯದ ದುರ್ವಾಸನೆ ಬಾರದಂತೆ ನೈಸರ್ಗಿಕ ಸಂಯೋಜನೆಗಳನ್ನು ಬಳಸಲಾಗುತ್ತದೆ ಮತ್ತು ಜೈವಿಕ ಖನಿಜ ರಸಗೊಬ್ಬರವನ್ನು ಉತ್ಪಾದಿಸಬಹುದಾಗಿದೆ. ಈ ತಂತ್ರಜ್ಞಾನವು ಮುಂಬೈನ ಐಐಟಿಯಿಂದ ಮಾನ್ಯತೆಯನ್ನು ಪಡೆದಿರುವುು ಇದರ ಹೆಗ್ಗಳಿಕೆಗೆ ಕಾರಣವಾಗಿದೆ.

►ಎಸ್‌ಬಿಟಿ ಎಂಬುದು ಜೈವಿಕ ಪರಿವರ್ತನಾ ಪ್ರಕ್ರಿಯೆಯಾಗಿದೆ. ಪ್ರಕೃತಿಯಲ್ಲಿ ನಡೆಯುವಂತೆ ವಾತಾವರಣಕ್ಕೆ ಹೊಂದಿಕೊಂಡು ಇಲ್ಲಿ ಶುದ್ಧೀಕರಣ ನಡೆಯುತ್ತದೆ. ಎಸ್‌ಬಿಟಿಯು ಆಮ್ಲಜನಕವನ್ನು ಒದಗಿಸುವ ಇಂಜಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸಿ ಗೃಹ ಮತ್ತು ಕೈಗಾರಿಕೆಗಳ ತ್ಯಾಜ್ಯ ನೀರನ್ನು ಶುದ್ಧಗೊಳಿಸುತ್ತದೆ. ಮಣ್ಣಿನ ಪರಿಸರ ವಿಜ್ಞಾನ ಹಾಗೂ ಜೈವಿಕ ಕ್ರಿಯೆಯನ್ನು ಬಳಸಿಕೊಂಡು ತ್ಯಾಜ್ಯ ನೀರು ಶುದ್ಧೀಕರಣಗೊಳಿಸಲಾಗುತ್ತದೆ.

ಉಳ್ಳಾಲದ ಅಭಿವೃದ್ಧಿಗೆ ಉತ್ತಮ ಒಳಚರಂಡಿ ವ್ಯವಸ್ಥೆಯ ಅಗತ್ಯವಿದೆ. ಹಾಗಾಗಿ ಹೊಸ ತಂತ್ರಜ್ಞಾನ ಬಳಸಿ ಅತ್ಯಾಧುನಿಕ ಮಾದರಿಯ ಮಲಿನ ನೀರು ಶುದ್ಧೀಕರಣ ಘಟಕ ಕಾಮಗಾರಿಗೆ ಚಾಲನೆ ನೀಡಲಾ ಗಿತ್ತು. ಕೆಲವರ ಅಪಸ್ವರದಿಂದ ಕಾಮಗಾರಿ ನಿರ್ಮಾಣಕ್ಕೆ ಅಡ್ಡಿಯಾಗಿವೆ. ಭವಿಷ್ಯದ ಹಿತದೃಷ್ಟಿಯಿಂದ ಈ ಕಾಮಗಾರಿ ಆರಂಭಿಸಲು ಸಾರ್ವಜನಿಕರು ಸಹಕರಿಸಬೇಕಿದೆ.

-ಯು.ಟಿ.ಖಾದರ್

ಶಾಸಕರು, ಮಂಗಳೂರು ವಿಧಾನ ಸಭಾ ಕ್ಷೇತ್ರ

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯು ಸಮಸ್ಯೆಯಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮಲಿನ ನೀರು ಶುದ್ಧೀಕರಣ ಘಟಕದ ಅಗತ್ಯವನ್ನು ಮನಗಂಡು ಕೋಡಿ ಮತ್ತು ಕಲ್ಲಾಪುವಿನಲ್ಲಿ ಘಟಕ ನಿರ್ಮಿಸಲು ನಿರ್ಧರಿಸಲಾಗಿತ್ತು. ಕಲ್ಲಾಪುವಿನ ಜಮೀನಿಗೆ ಸಂಬಂಧಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೊಕ್ಕ ಕಾರಣ ಘಟಕದ ಕಾಮಗಾರಿ ಆರಂಭಿಸಿಲ್ಲ. ಕೋಡಿಯಲ್ಲಿ ಘಟಕ ನಿರ್ಮಾಣಕ್ಕೆ ಆಡಳಿತಾತ್ಮಕ ಸಮಸ್ಯೆ ಇಲ್ಲ. ಕೆಲವರು ವಿರೋಧಿಸಿದ್ದು, ಅವರನ್ನು ಕಂಡು ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆೆ.

-ರಾಯಪ್ಪ

ಮುಖ್ಯಾಧಿಕಾರಿ

ಉಳ್ಳಾಲ ನಗರಸಭೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News