ಬಿಜೆಪಿ ಗೆಲುವು ಸರಕಾರದ ಸಾಧನೆಗೆ ಸಂದ ಮನ್ನಣೆ: ಅರವಿಂದ ಲಿಂಬಾವಳಿ

Update: 2019-12-09 17:57 GMT

ಬೆಂಗಳೂರು, ಡಿ. 9: ಉಪಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ರಾಜ್ಯದಲ್ಲಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಾಧನೆಗೆ ಸಂದ ಮನ್ನಣೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಉಪಚುನಾವಣೆ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಸೋಮವಾರ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಏಕಪಕ್ಷದ ಸ್ಥಿರ ಸರಕಾರದ ಅನಿವಾರ್ಯತೆ ಹಾಗೂ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರದವಿರುವುದು ಅಭಿವೃದ್ಧಿಗೆ ಸಹಕಾರಿ ಎಂಬ ವಿಷಯಗಳನ್ನು ಮತದಾರರ ಮುಂದಿಟ್ಟು ಬಿಜೆಪಿ ಚುನಾವಣೆ ಎದುರಿಸಿತ್ತು. ಹದಿನೈದು ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದ್ದು, ಮತದಾರರು ಸರಕಾರವನ್ನು ಸದೃಢಗೊಳಿಸಿದ್ದಾರೆ. ಇದಕ್ಕಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕೆ.ಆರ್.ಪೇಟೆ ಗೆಲ್ಲುವ ಮೂಲಕ ಮಂಡ್ಯ ಜಿಲ್ಲೆಯಲಿ ಬಿಜೆಪಿ ಅರಳಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮೊದಲ ಬಾರಿಗೆ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಆ ಮೂಲಕ ಎರಡೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ಬಂದಿದೆ. ಒಟ್ಟಾರೆ ಪಕ್ಷಕ್ಕೆ ಶಕ್ತಿ ಕಡಿಮೆ ಇದ್ದ ಕಡೆಯೂ ಬಲ ಬಂದಿದೆ. ಯಡಿಯೂರಪ್ಪ ಅವರ ದಣಿವರಿಯದ ಪ್ರಚಾರ, ಬೂತ್ ಮಟ್ಟದಲ್ಲಿ ಕಾರ್ಯಕರ್ತ ಪರಿಶ್ರಮದ ಪ್ರಚಾರದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ತಿಳಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಗಳಾದ ಚುನಾವಣೆಗೆ ಸ್ಪರ್ಧಿಸಿದವರನ್ನು ಅನರ್ಹರು ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಪ್ರಚಾರ ಮಾಡಿದರು. ಜನರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿರುವುದರಿಂದ ಅನರ್ಹರು ಎಂಬ ಪದ ಬಳಕೆ ಮಾಡುವುದನ್ನು ಆ ಪಕ್ಷದ ನಾಯಕರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಕಾರ್ಯದರ್ಶಿ ಬೇಳೂರು ರಾಘವೇಂದ್ರ ಶೆಟ್ಟಿ, ಮಾಧ್ಯಮ ಸಂಚಾಲಕ ಆನಂದ್, ವಕ್ತಾರೆ ಮಾಳವಿಕ ಅವಿನಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News