ಮಕ್ಕಳಿಗೆ ಜೇನು ವಿತರಣೆ ಯೋಜನೆ ಅನುಷ್ಠಾನದಿಂದ ಹಿಂದಕ್ಕೆ ಸರಿದ ರಾಜ್ಯ ಸರಕಾರ

Update: 2019-12-10 15:54 GMT

ಬೆಂಗಳೂರು, ಡಿ.10: ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಪೌಷ್ಟಿಕಾಂಶಯುಕ್ತ ಹಾಲಿನ ಜತೆಗೆ ಜೇನುತುಪ್ಪ ವಿತರಿಸುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನೀಡಿದ್ದ ಯೋಜನೆಯ ಅನುಷ್ಠಾನದಿಂದ ರಾಜ್ಯ ಸರಕಾರ ಹಿಂದೆ ಸರಿದಿದೆ.

ರಾಜ್ಯ ಸರಕಾರ ಈಗಾಗಲೇ ಬಿಸಿಯೂಟ ಹಾಗೂ ಹಾಲು ನೀಡುತ್ತಿದೆ. ಇದರ ಜತೆಗೆ ಪೌಷ್ಟಿಕಾಂಶಯುಕ್ತ ‘ಜೇನುತುಪ್ಪ’ ವಿತರಿಸುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಹಾಗೂ ಎಂಎಚ್‌ಆರ್‌ಡಿ ಜತೆ ಯೋಜನೆ ಆರಂಭಿಸುವಂತೆ ನಿರ್ದೇಶನ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ವರದಿ ನೀಡುವಂತೆ ಸರಕಾರ ಮನವಿ ಮಾಡಿತ್ತು. ಅದು ಎಲ್ಲ ರೀತಿಯಲ್ಲಿಯೂ ಸಮಾಲೋಚನೆ ನಡೆಸಿದ್ದು, ಹಾಲು ಹಾಗೂ ಬಿಸಿಯೂಟದ ಜತೆ ಜೇನು ವಿತರಣೆ ಮಾಡುವುದರಿಂದ ಯಾವುದೇ ರೀತಿಯಲ್ಲಿ ಪ್ರಯೋಜನವಿಲ್ಲ ಎಂದು ವೈದ್ಯಕೀಯ ವರದಿಗಳು ಹೇಳಿವೆ. ಹೀಗಾಗಿ, ಅದನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಇಲಾಖೆ ಹೇಳಿದೆ.

ಜೇನಿನಲ್ಲಿ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವ ಶಕ್ತಿಯಿದೆ. ಆ್ಯಂಟಿ ಬಯೋಟಿಕ್ ಗುಣಗಳನ್ನು ಹೊಂದಿದೆ. ಕೆಮ್ಮು, ಗಂಟಲು ಕೆರೆತ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣವಿದೆ. ಜೇನುತುಪ್ಪ ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯುತ್ತದೆ. ಕೊಬ್ಬಿನಂತಹ ಅಂಶಗಳನ್ನು ಕರಗಿಸುವ ಗುಣ ಹೊಂದಿದೆ. ಜೇನಿನಲ್ಲಿ ಪೌಷ್ಟಿಕಾಂಶಗಳು, ಶರ್ಕರ ಪಿಷ್ಟಗಳು, ನಾರು, ಸೋಡಿಯಂ, ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ 6, ಕಬ್ಬಿಣ, ಮೆಗ್ನೀಷಿಯಂ, ರಂಜಕ, ಸತು, ಕ್ಯಾಲ್ಸಿಯಂ ಅಂಶಗಳಿವೆ. ಪ್ರತಿ ದಿನ ಜೇನು ಸೇವನೆ ಮಾಡುವುದರಿಂದ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಲಭಿಸುತ್ತದೆ. ಈ ಬಗ್ಗೆ ಕೇಂದ್ರ ಕಲ್ಯಾಣ ಇಲಾಖೆಯಲ್ಲಿ ಸಂಶೋಧನೆ ಪ್ರಕಾರ 600 ಬಗೆಯ ಅಂಶಗಳಿವೆ. ಹೀಗಾಗಿ, ಮಕ್ಕಳಿಗೆ ಜೇನು ವಿತರಿಸುವಂತೆ ಸಲಹೆಯನ್ನು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News