ನನ್ನ ಒಂದು ಕಣ್ಣಿಗೆ ತಿವಿದ ಸಿದ್ದರಾಮಯ್ಯರ ಎರಡು ಕಣ್ಣುಗಳು ಹೋಯಿತು: ಎಂಟಿಬಿ ನಾಗರಾಜ್‌

Update: 2019-12-10 16:19 GMT

ಬೆಂಗಳೂರು, ಡಿ.10: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್‌ಗೆ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ಮಹದೇವಪುರ ಸಮೀಪದ ಗರುಡಾಚಾರ್‌ ಪಾಳ್ಯದಲ್ಲಿರುವ ಎಂಟಿಬಿ ನಾಗರಾಜ್ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಐದಾರು ದಿನಗಳಲ್ಲಿ ನಾನು ಹೊಸದಿಲ್ಲಿಗೆ ತೆರಳುತ್ತಿದ್ದೇನೆ. ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡಿ ಎಂಟಿಬಿ ನಾಗರಾಜ್‌ಗೆ ಸೂಕ್ತ ಸ್ಥಾನಮಾನ ನೀಡುವ ಸಂಬಂಧ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಂಟಿಬಿ ನಾಗರಾಜ್ ಅವರನ್ನು ಕೇಳದೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಹಿಂದೆ ಅವರು ಸಚಿವರಾಗಿದ್ದಾಗ ಹೇಗೆ ಇದ್ದರೋ, ಅದೇ ರೀತಿ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಹೊಸಕೋಟೆ ತಾಲೂಕನ್ನು ಎಂಟಿಬಿ ನಾಗರಾಜ್ ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಅವರು ಚುನಾವಣೆಯಲ್ಲಿ ಸೋತಿದ್ದು ನಮಗೆ ಸಮಾಧಾನವಾಗಿಲ್ಲ. ಒಬ್ಬ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದ ನಾಗರಾಜ್, ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದರು. ಒಳ್ಳೆಯ ಕೆಲಸ ಮಾಡಿದವರಿಗೆ ಕಾಲವಿಲ್ಲ ಅನ್ನೋದು ಇದರಿಂದ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಉಪ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್‌ರನ್ನು ಬೆಂಬಲಿಸದ ಆರೋಪ ಎದುರಿಸುತ್ತಿರುವ ಸಂಸದ ಬಿ.ಎನ್.ಬಚ್ಚೇಗೌಡ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಚ್ಚೇಗೌಡ ಬಗ್ಗೆ ನಾನು ಬಹಿರಂಗವಾಗಿ ಮಾಧ್ಯಮಗಳ ಎದುರು ಮಾತನಾಡುವುದಿಲ್ಲ. ಈ ವಿಚಾರ ಈಗಾಗಲೇ ಹೈಕಮಾಂಡ್ ಗಮನಕ್ಕೆ ಬಂದಿದೆ. ಅವರೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಹೇಳಿದ್ದಾರೆ. ಬಚ್ಚೇಗೌಡರ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ನಾನು ಸೋಲಲು ಶರತ್ ಬಚ್ಚೇಗೌಡ ಹಾಗೂ ಬಚ್ಚೇಗೌಡ ಕಾರಣ ಎಂಬುದನ್ನು ಈಗಾಗಲೇ ತಿಳಿಸಿದ್ದೇನೆ ಎಂದರು.

ಪಕ್ಷದ ಚಿಹ್ನೆಯಡಿ ಗೆದ್ದ ಸಂಸದರು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ. ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಂದರೂ ಬಚ್ಚೇಗೌಡ ಬಂದಿಲ್ಲ. ಅವರು ಪಕ್ಷದ್ರೋಹದ ಕೆಲಸ ಮಾಡಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶರತ್ ಬಚ್ಚೇಗೌಡ ಜೊತೆ ಕೆಲವು ಬಿಜೆಪಿ ನಾಯಕರು ಸೇರಿದ್ದಾರೆ ಎಂದು ಅವರು ಆರೋಪಿಸಿದರು.

ಕುರುಬರ ಸೋಲಿಗೆ ಸಿದ್ದರಾಮಯ್ಯ ಕಾರಣ

ಸಿದ್ದರಾಮಯ್ಯ ನನ್ನ ಒಂದು ಕಣ್ಣಿಗೆ ತಿವಿದರು. ಆದರೆ, ಸಿದ್ದರಾಮಯ್ಯ ಅವರ ಎರಡು ಕಣ್ಣುಗಳು ಹೋದವು. ಕುರುಬ ಸಮಾಜದ ಇಬ್ಬರು(ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್) ಈ ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯ ಕಾರಣ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ತಟ್ಟುತ್ತದೆ.

-ಎಂಟಿಬಿ ನಾಗರಾಜ್, ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News