ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ: ಸತೀಶ್ ಜಾರಕಿಹೊಳಿ

Update: 2019-12-10 16:27 GMT

ಬೆಳಗಾವಿ, ಡಿ.10: ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಿಂದಾಗಿ ನೊಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿರಬಹುದು. ಆದರೆ, ಅವರು ಕಾಂಗ್ರೆಸ್‌ಗೆ ಅನಿವಾರ್ಯವಾಗಿದ್ದು, ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ, ವಲಸಿಗರು ಎನ್ನುವ ತಾರತಮ್ಯ ನಮ್ಮಲ್ಲಿ ಇಲ್ಲ. ಗುಂಪುಗಾರಿಕೆ, ಭಿನ್ನಾಭಿಪ್ರಾಯ ಎಲ್ಲ ಪಕ್ಷಗಳಲ್ಲಿ ಸಹಜವಾಗಿ ಇದ್ದೇ ಇರುತ್ತವೆ. ಅಲ್ಲದೆ, ಧರ್ಮ-ಜಾತಿ ಆಧಾರದ ಮೇಲೆ ಈ ಉಪಚುನಾವಣೆ ನಡೆದಿದೆ ಎಂದು ಹೇಳಿದರು.

ಗೋಕಾಕ್‌ನಲ್ಲಿ ನಮ್ಮದೇ ಆದ ಮತಗಳಿವೆ. ಇಷ್ಟೆಲ್ಲ ಒತ್ತಡದ ನಡುವೆಯೂ ಜನರು ನಮ್ಮ ಬೆಂಬಲಕ್ಕಿದ್ದರು. ಸರಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿಗೆ ಗೆಲುವಾಗಿದೆ. ಸ್ಥಳೀಯ ವಿಷಯಗಳ ಬಗ್ಗೆ ಜನರು ಗಮನ ಕೊಡಲಿಲ್ಲ. ಹೀಗಾಗಿ, ಬಿಜೆಪಿಗೆ ಜಯ ಲಭಿಸಿದೆ ಎಂದು ಅಭಿಪ್ರಾಯಪಟ್ಟರು.

ಗೋಕಾಕ್ ನಗರಸಭೆಯ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಯಬೇಕು ಎಂದ ಅವರು, ನಗರಸಭೆಯಲ್ಲಿರುವ ಅವ್ಯವಹಾರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಸ್ವೀಕರಿಸುವುದು ಸ್ವಂತ ಲಾಭಕ್ಕೆ. ಇದರಿಂದ ನಮ್ಮ ಭಾಗಕ್ಕೆ, ನಮ್ಮ ಜಿಲ್ಲೆಗೆ ಲಾಭ ಇಲ್ಲ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News