ಐಟಿ ದಾಳಿ ಪ್ರಕರಣ: ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರಾದ ಡಿಕೆಶಿ; ವಿಚಾರಣೆ ಮುಂದೂಡಿಕೆ

Update: 2019-12-10 17:15 GMT

ಬೆಂಗಳೂರು, ಡಿ.10: ಹೊಸದಿಲ್ಲಿ ಹಾಗೂ ಬೆಂಗಳೂರು ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತೆರಳಿ ವಿಚಾರಣೆ ಎದುರಿಸಿದರು.

ಸಚಿವರೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತರು ವಿಚಾರಣೆಗೆ ಹಾಜರಾಗಿದ್ದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇತರರ ವಿರುದ್ಧ ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೋರ್ಟ್ ಸಾಕ್ಷಿಗಳ ವಿಚಾರಣೆ ನಡೆಸಿತು.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಐಟಿ ಅಧಿಕಾರಿಗಳು ದಾಖಲಿಸಿರುವ ಪ್ರಕರಣ ಕೈಬಿಡುವಂತೆ ಡಿಕೆಶಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆ ಆರಂಭಿಸಿದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇತರರ ವಿಚಾರಣೆಗೆ ಒಂದು ತಿಂಗಳು ವಿನಾಯಿತಿ ಕೊಡಬೇಕು ಎಂದು ವಕೀಲರು ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಇದರಿಂದ ಆಕ್ರೋಶಗೊಂಡ ನ್ಯಾಯಾಧೀಶರು ಇಷ್ಟೊಂದು ಅವಕಾಶ ಏಕೆ ಬೇಕು ಎಂದು ಪ್ರಶ್ನಿಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ವಾರ ವಿಚಾರಣೆ ಇದೆ. ಹೀಗಾಗಿ ವಿನಾಯಿತಿ ಬೇಕು ಎಂದು ಮನವಿ ಮಾಡಿದರು.

ಸುಪ್ರೀಂಕೋರ್ಟ್ ಮುಂದಿನ ವಾರದಲ್ಲಿ ವಿಚಾರಣೆ ನಡೆಸುವುದರಿಂದ ಡಿ.20ಕ್ಕೆ ನಾವು ಸಾಕ್ಷಿಗಳನ್ನು ವಿಚಾರಣೆ ನಡೆಸುತ್ತೇವೆ. ಹೆಚ್ಚಿನ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಧೀಶರು ವಿಚಾರಣೆಯನ್ನು ಡಿ.20ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News