ಸರಕಾರ ಸುಭದ್ರಗೊಳಿಸಿದ ನೂತನ ಶಾಸಕರಿಂದ ಪ್ರಮುಖ ಖಾತೆಗಳಿಗೆ ಬೇಡಿಕೆ

Update: 2019-12-10 17:35 GMT

ಬೆಂಗಳೂರು, ಡಿ.10: ಉಪ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಸುಭದ್ರಗೊಳಿಸಿರುವ ನೂತನ ಶಾಸಕರು ಇದೀಗ ಪ್ರಮುಖ ಖಾತೆಗಳಿಗೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಟ್ಟಿದ್ದಾರೆ. ಅನರ್ಹತೆಯ ಹಣೆಪಟ್ಟಿ ಕಟ್ಟಿಕೊಂಡು ಚುನಾವಣೆ ಎದುರಿಸಿದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಪ್ರಚಾರ ಮಾಡುವಾಗ, ಇವರನ್ನು ಗೆಲ್ಲಿಸಿ ಕಳುಹಿಸಿ ನಾನು ಇವರನ್ನು ಸಚಿವರನ್ನಾಗಿ ಮಾಡುತ್ತೇನೆ. ಕೊಟ್ಟ ಮಾತನ್ನು ಎಂದಿಗೂ ತಪ್ಪುವುದಿಲ್ಲ ಎಂದು ಭಾಷಣ ಮಾಡಿದ್ದರು.

ಮುಖ್ಯಮಂತ್ರಿ ಬಳಿ ಇರುವ ಪ್ರಮುಖ ಖಾತೆಗಳನ್ನು ನೂತನ ಶಾಸಕರಿಗೆ ಹಂಚಿಕೆ ಮಾಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಈಗಾಗಲೇ ಬೇರೆ ಸಚಿವರ ಬಳಿ ಇರುವ ಖಾತೆಗಳನ್ನು ಪಡೆದು ಇವರಿಗೆ ಹಂಚಿಕೆ ಮಾಡಲು ಯತ್ನಿಸುವಾಗ ಹಾಲಿ ಸಚಿವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಅಲ್ಲದೆ, ಪ್ರಮುಖ ಖಾತೆಗಳ ಜೊತೆಗೆ ಜಿಲ್ಲಾ ಉಸ್ತುವಾರಿಗಳನ್ನು ಬದಲಾವಣೆ ಮಾಡಬೇಕಾದ ಪರಿಸ್ಥಿತಿಯಿದೆ. ಆ ಸಂದರ್ಭದಲ್ಲಿಯೂ ಸಚಿವರು ಮುಖ್ಯಮಂತ್ರಿಯ ನಿರ್ಧಾರವನ್ನು ವಿರೋಧಿಸುವ ಸಾಧ್ಯತೆಯಿದೆ. ಆದುದರಿಂದ, ಈ ಸಂಬಂಧ ಎಚ್ಚರಿಕೆಯ ನಡೆ ಅನುಸರಿಸಲು ಮುಂದಾಗಿರುವ ಯಡಿಯೂರಪ್ಪ, ನೂತನ ಶಾಸಕರಿಗೆ ಖಾತೆಗಳನ್ನು ಹೈಕಮಾಂಡ್ ಮೂಲಕ ಹಂಚಿಕೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅಥವಾ ಶನಿವಾರ ರಾತ್ರಿ ಮುಖ್ಯಮಂತ್ರಿ ಹೊಸದಿಲ್ಲಿಗೆ ತೆರಳಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಚರ್ಚಿಸಿ ಖಾತೆಗಳ ಹಂಚಿಕೆ ಮಾಡಿ, ಸೋಮವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಲು ಉದ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಮೇಶ್ ಜಾರಕಿಹೊಳಿ-ಜಲಸಂಪನ್ಮೂಲ, ಡಾ.ಕೆ.ಸುಧಾಕರ್-ವೈದ್ಯಕೀಯ ಶಿಕ್ಷಣ, ಭೈರತಿ ಬಸವರಾಜ-ಬೆಂಗಳೂರು ನಗರಾಭಿವೃದ್ಧಿ, ಎಸ್.ಟಿ.ಸೋಮಶೇಖರ್-ಸಹಕಾರ, ಮಹೇಶ್ ಕುಮಟಳ್ಳಿ- ಸಣ್ಣ ಕೈಗಾರಿಕೆ, ಶಿವರಾಮ್ ಹೆಬ್ಬಾರ್-ಪೌರಾಡಳಿತ, ಬಿ.ಸಿ.ಪಾಟೀಲ್-ಕೃಷಿ, ಕೆ.ಗೋಪಾಲಯ್ಯ- ಕಾರ್ಮಿಕ, ನಾರಾಯಣಗೌಡ-ತೋಟಗಾರಿಕೆ ಖಾತೆ, ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿಗೆ ಸುಧಾಕರ್, ಮಂಡ್ಯ ಜಿಲ್ಲೆಯ ಉಸ್ತುವಾರಿಗೆ ನಾರಾಯಣಗೌಡ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News