ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಆತ್ಮಾವಲೋಕನ ಅಗತ್ಯ: ಎಚ್.ಕೆ.ಪಾಟೀಲ್

Update: 2019-12-10 17:50 GMT

ಬೆಂಗಳೂರು, ಡಿ.10: 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗದ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ ಪಕ್ಷಾಂತರ ಹಾಗೂ ಅನರ್ಹತೆ ಪ್ರಮುಖ ಚರ್ಚಾ ವಿಷಯವಾಗಿತ್ತು. ಮತದಾರರು ಸೂಕ್ತ ತೀರ್ಪು ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದರು.

ಜನರ ಮನಸ್ಸನ್ನು ಘಾಸಿಗೊಳಿಸುವಂತಹ ವಾಮಮಾರ್ಗಗಳನ್ನು ಅನುಸರಿಸಲಾಗಿತ್ತು. ಆದರೆ, ಚುನಾವಣಾ ಆಯೋಗ ಮಾತ್ರ ಮೂಕ ಪ್ರೇಕ್ಷಕವಾಗಿತ್ತು. ಈ ವ್ಯವಸ್ಥೆಯ ಬಗ್ಗೆಯೇ ನಿರಾಸೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಉಪ ಚುನಾವಣೆಯ ಫಲಿತಾಂಶಕ್ಕೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಈ ರೀತಿ ರಾಜೀನಾಮೆ ನೀಡುವುದು ಸ್ವಾಭಾವಿಕವಾದದ್ದು. ಆದರೆ, ಈ ಬಗ್ಗೆ ನಾನು ಹೆಚ್ಚಿಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಈ ಚುನಾವಣೆ ನಡೆದಿರುವುದೇ ಅನೈತಿಕವಾಗಿ. ಇದರಲ್ಲಿ ನೈತಿಕತೆಯ ಪ್ರಶ್ನೆಯೇ ಬರುವುದಿಲ್ಲ. ಜನ ತಮ್ಮ ತೀರ್ಮಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಪಕ್ಷದ ವೇದಿಕೆಯಲ್ಲಿ ಈ ವಿಚಾರದ ಕುರಿತು ಚರ್ಚೆ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News