ಗೋದಾಮುಗಳಲ್ಲಿ ಈರುಳ್ಳಿ ದಾಸ್ತಾನು 50 ಕ್ವಿಂಟಾಲ್‍ಗೆ ಮಿತಿಗೊಳಿಸಿ: ಮೈಸೂರು ಜಿಲ್ಲಾಧಿಕಾರಿ ಆದೇಶ

Update: 2019-12-10 18:24 GMT
ಸಾಂದರ್ಭಿಕ ಚಿತ್ರ

ಮೈಸೂರು,ಡಿ.10: ಮುಕ್ತ ಮಾರುಕಟ್ಟೆಯಲ್ಲಿ ಮತ್ತು ಸಗಟು ಗೋದಾಮುಗಳಲ್ಲಿ ಈರುಳ್ಳಿ ದಾಸ್ತಾನಿರಿಸುವುದನ್ನು 50 ಕ್ವಿಂಟಾಲ್ ಗೆ ಮಿತಿಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ ಅವರು ಸರ್ಕಾರವು ಉಲ್ಲೇಖಿತ ಅಧಿಸೂಚನೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಪರವಾನಿಗೆ ಆದೇಶ 1986 ಅಡಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ, ಈರುಳ್ಳಿ ಸಗಟು ಮಾರಾಟಗಾರರಲ್ಲಿ, ಡೀಲರ್ ಗಳಲ್ಲಿ, ಉತ್ಪಾದಕರಲ್ಲಿ, ಕಮಿಷನ್ ಏಜೆಂಟ್ ಗಳಲ್ಲಿ, ದಾಸ್ತಾನಿನ ಮಿತಿಯನ್ನು 250 ಕ್ವಿಂಟಾಲ್ ಗೆ ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರಲ್ಲಿ ದಾಸ್ತಾನಿನ ಮಿತಿಯನ್ನು 50 ಕ್ವಿಂಟಾಲ್ ಗೆ ಮಿತಿಗೊಳಿಸಿ ಆದೇಶಿಸಲಾಗಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಈರುಳ್ಳಿ ಸಗಟು ಮಾರಾಟಗಾರರು ಡೀಲರ್ ಗಳು ಕಮಿಷನ್ ಏಜೆಂಟ್ ಗಳಿಗೆ ಹಾಗೂ ಚಿಲ್ಲರೆ ಮಾರಾಟಗಾರರು ಉಲ್ಲೇಖಿತ ಅಧಿಸೂಚನೆಯಲ್ಲಿ ಆದೇಶಿಸಿರುವಂತೆ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ಮಾರಾಟಗಾರರು, ಡೀಲರ್ ಗಳು, ಉತ್ಪಾದಕರು, ಕಮಿಷನ್ ಏಜೆಂಟ್ ಗಳು, ಈರುಳ್ಳಿ ದಾಸ್ತಾನಿನ ಮಿತಿಯನ್ನು 250 ಕ್ವಿಂಟಾಲ್ ಗೆ ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರು ಈರುಳ್ಳಿ ದಾಸ್ತಾನಿನ ಮಿತಿಯನ್ನು 50 ಕ್ವಿಂಟಾಲ್ ಗೆ ಮಿತಿಗೊಳಿಸುವಂತೆ ಸೂಚಿಸಿದೆ. ಈ ಗರಿಷ್ಠ ದಾಸ್ತಾನಿನ ಮಿತಿಯನ್ನು ಮೀರಿ ಅಧಿಕ ಈರುಳ್ಳಿಯನ್ನು ದಾಸ್ತಾನಿರಿಸಿದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. 

ಜಿಲ್ಲೆಯ ಈರುಳ್ಳಿ ಸಗಟು ಮಾರಾಟಗಾರರು ಡೀಲರ್ ಗಳು, ಕಮಿಷನ್ ಏಜೆಂಟ್ ಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಮತ್ತು ಈರುಳ್ಳಿ ಚಿಲ್ಲರೆ ಮಾರಾಟಗಾರರು ತಮ್ಮ ತಾಲೂಕಿನ ತಹಶೀಲ್ದಾರರಿಂದ ಮೈಸೂರು ನಗರದವರಾದಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಅನೌಪಚಾರಿಕ ಪಡಿತರ ಪ್ರದೇಶ ಕಚೇರಿಯಿಂದ ಕರ್ನಾಟಕ ಅಗತ್ಯ ವಸ್ತುಗಳ ಪರವಾನಿಗೆ ಆದೇಶ 1986ರಂತೆ ಪರವಾನಿಗೆ ಪಡೆದುಕೊಳ್ಳಲು ಸೂಚಿಸಿದೆ.

ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು ಮತ್ತು ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ-ಮೈಸೂರು ನಗರ ಇವರು ತಮ್ಮ ವ್ಯಾಪ್ತಿಯಲ್ಲಿ ಉಲ್ಲೇಖಿತ ಅಧಿಸೂಚನೆಯಲ್ಲಿ ತಿಳಿಸಿರುವ ದಾಸ್ತಾನಿನ ಮಿತಿಯನ್ನು ಮೀರಿ ದಾಸ್ತಾನಿರಿಸುವವರ ವಿರುದ್ಧ ಅನಿರೀಕ್ಷಿತ ಕಾರ್ಯಾಚರಣೆ ಮಾಡಿ ಅಗತ್ಯ ವಸ್ತುಗಳ ಕಾಯ್ದೆ-1955ರಡಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News